ಬೆಂಗಳೂರು:ದೇಶದಲ್ಲೀಗ ಕೋವಿಡ್ ರೂಪಾಂತರ ತಳಿ ಓಮಿಕ್ರೋನ್ ವೈರಸ್ ಹರಡುವ ಆತಂಕದ ಬೆನ್ನಲ್ಲೇ ರಾಜ್ಯ ಸರ್ಕಾರ ಸಭೆ ನಡೆಸಿ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿದೆ. ಜನರಲ್ಲೂ ರೂಪಾಂತರ ತಳಿ ಆತಂಕ ಸೃಷ್ಟಿಸಿದೆ. ಈ ಅಡ್ಡಿ- ಆತಂಕ ನಡುವೆಯೂ ಹೊಸ ತಳಿಗೆ ಡೋಸ್ ಕೊಡುವ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಸುಲಿಗೆ ಮಾಡಿರುವ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೃಂದಾವನ ನಗರದ 6ನೇ ಕ್ರಾಸ್ನಲ್ಲಿರುವ ಸಂಪತ್ ಸಿಂಗ್ ಎಂಬುವವರ ಮನೆಗೆ ನುಗ್ಗಿ 50 ಗ್ರಾಂ ಚಿನ್ನಾಭರಣ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ವಿವರ:
ಇಂದು ಬೆಳಗ್ಗೆ 11.30ರ ವೇಳೆ ಕಾರಿನಲ್ಲಿ ಮೂವರು ದುಷ್ಕರ್ಮಿಗಳು ಬಂದಿದ್ದಾರೆ. ಈ ಪೈಕಿ ಓರ್ವ ಆರೋಪಿ ಕೈಗಳಿಗೆ ಗ್ಲೌಸ್ ಹಾಕಿಕೊಂಡು ವೈದ್ಯಕೀಯ ಸಿಬ್ಬಂದಿ ಸೋಗಿನಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ಓಮಿಕ್ರೋನ್ ರೂಪಾಂತರ ಸೋಂಕು ಹರಡುತ್ತಿದ್ದು, ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಬಗ್ಗೆ ಮನೆಯಲ್ಲಿದ್ದ ಸಂಪತ್ ಸಿಂಗ್ ಪತ್ನಿ ಪಿಸ್ತಾದೇವಿ ಹಾಗೂ ಸೊಸೆ ರಕ್ಷಾ ಬಳಿ ವಿಚಾರಿಸಿದ್ದಾನೆ. ಜೊತೆಗೆ ಹೊಸ ತಳಿಯ ಕೋವಿಡ್‌ಗೆ ವ್ಯಾಕ್ಸಿನೇಷನ್ ಹಾಕಲು ಬಂದಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾನೆ.