ಬೆಂಗಳೂರು: ವೃದ್ದೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ತಂದೆ ಮಗನ ಸಹಿತ ಆರು ಜನ ಆರೋಪಿಗಳನ್ನ ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಗ್ಯಾನ್ ರಂಜನ್ ದಾಸ್, ಶ್ರೀಕಾಂತ್ ದಾಶ್, ಸುಭಾಷ್ ಬಿಸ್ವಾಲ್, ಪದ್ಮನಾಭ್ ಕತುವಾ, ಬಿಷ್ಣು ಚರಣ್ ಬೆಹ್ರಾ ಹಾಗೂ ಸುಧಾಂಶು ಬೆಹ್ರಾ ಬಂಧಿತ ಆರೋಪಿಗಳು.
ವೃದ್ದೆಯ ಕೈಕಾಲು ಕಟ್ಟಿ ದರೋಡೆ; ಅಪ್ಪ-ಮಗನ ಸಹಿತ ಆರು ಜನರನ್ನ ಬಂಧನ ಏನಿದು ಪ್ರಕರಣ?: ಜನವರಿ 3ರಂದು ಕೆಎಸ್ ಲೇಔಟ್ ಠಾಣಾ ವ್ಯಾಪ್ತಿಯ ವೈಷ್ಣವಿ ಸುರೇಶ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ವೃತ್ತಿಯಲ್ಲಿ ವೈದ್ಯೆಯಾಗಿರುವ ವೈಷ್ಣವಿ ತಮ್ಮ ಕ್ಲಿನಿಕ್ಗೆ ತೆರಳಿದ್ದಾಗ ಅವರ ತಾಯಿ ಶ್ರೀಲಕ್ಷ್ಮಿ ಒಬ್ಬರೇ ಮನೆಯಲ್ಲಿದ್ದರು. ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಅರಿತಿದ್ದ ಆರೋಪುಗಳು ಕೊರಿಯರ್ ಬಾಯ್ ಹೆಸರಿನ ಮೂಲಕ ವೃದ್ದೆ ನಂಬಿಸಿ ಬಾಗಿಲು ತೆರೆಸಿದ್ದರು. ಬಳಿಕ ಮನೆಗೆ ನುಗ್ಗಿದ ದುಷ್ಕರ್ಮಿಗಳು ಶ್ರೀಲಕ್ಷ್ಮಿ ಅವರ ಕೈಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಚ್ಚಿ ಮನೆಯಲ್ಲಿದ್ದ 3.50 ಲಕ್ಷ ರೂ ನಗದು, 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಕೆ.ಎಸ್.ಲೇಔಟ್ ಪೊಲೀಸರು ಒಡಿಶಾ ಮೂಲದ ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.
ಅಪ್ಪ - ಮಗನ ಕೃತ್ಯ ಬಯಲು:ಆರೋಪಿಗಳ ಪೈಕಿ ಬಿಷ್ಣು ಚರಣ್ ಬೆಹ್ರಾನ ಅಳಿಯ ಈ ಹಿಂದೆ ವೈಷ್ಣವಿ ಸುರೇಶ್ ಮನೆಯಲ್ಲಿ ಕಾರು ಚಾಲಕ ಹಾಗೂ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ. ಕೆಲ ದಿನಗಳ ಕಾಲ ಬಿಷ್ಣು ಚರಣ್ ಅಳಿಯ ಮತ್ತು ಮಗಳ ಮನೆಯಲ್ಲಿ ವಾಸವಾಗಿದ್ದ. ಇತ್ತೀಚಿಗೆ ಕೆಲ ದಿನಗಳ ಹಿಂದಷ್ಟೇ ಬಿಷ್ಣು ಚರಣ್ ಅಳಿಯನನ್ನ ಬೇರೆಡೆಗೆ ಕೆಲಸಕ್ಕೆ ನೇಮಿಸಲಾಗಿತ್ತು.
ಈ ಸಂದರ್ಭವನ್ನು ಬಳಸಿಕೊಂಡು ಮನೆ ಕಳ್ಳತನಕ್ಕೆ ಆತ ನಿರ್ಧರಿಸಿದ್ದ. ಇದಕ್ಕಾಗಿ ಆರೋಪಿ ಬಿಷ್ಣು ಚರಣ್ ಒಡಿಶಾದಿಂದ ತನ್ನ ಮಗ ಸುಧಾಂಶು ಬೆಹ್ರಾ ಹಾಗೂ ಉಳಿದ ನಾಲ್ವರು ಆರೋಪಿಗಳನ್ನ ಕರೆಸಿಕೊಂಡಿದ್ದ. ಜನವರಿ 3ರಂದು ರಾತ್ರಿ 8:30ರ ಸುಮಾರಿಗೆ ಅಪ್ಪ ಮಗ ಇಬ್ಬರೂ ಸೇರಿ ಉಳಿದ ನಾಲ್ವರು ಆರೋಪಿಗಳನ್ನ ಮುಂದೆ ಬಿಟ್ಟು ಕಳ್ಳತನ ಮಾಡಿಸಿ, ಬಳಿಕ ಒಡಿಶಾಗೆ ಪರಾರಿಯಾಗಿದ್ದರು.
ತ್ವರಿತ ತನಿಖೆ: ಪ್ರಕರಣದ ತ್ವರಿತ ತನಿಖೆ ಕೈಗೊಂಡ ಕೆ.ಎಸ್.ಲೇಔಟ್ ಠಾಣಾ ಇನ್ಸ್‌ಪೆಕ್ಟರ್ ಕೊಟ್ರೇಶಿ.ಬಿ.ಎಂ, ಸಬ್ ಇನ್ಸ್‌ಪೆಕ್ಟರ್ ನಾಗೇಶ್ ಎಚ್.ಎಂ. ಅವರನ್ನೊಳಗೊಂಡ ತಂಡ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿದ್ದ ಆರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರ ಪೈಕಿ ಬಿಷ್ಣು ಚರಣ್ ಹಾಗೂ ಆತನ ಮಗ ಸುಧಾಂಶು ಬೆಹ್ರಾ ವಿರುದ್ಧ ದೆಹಲಿ ಹಾಗೂ ಮುಂಬೈನಲ್ಲಿಯೂ ಕಳ್ಳತನ ಪ್ರಕರಣಗಳಿವೆ. ಸದ್ಯ ಬಂಧಿತರಿಂದ 3 ಲಕ್ಷಕ್ಕೂ ಅಧಿಕ ನಗದು, 4 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ನಿಂದ ಕನ್ನ: ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಲ್ಡನ್ ಬೆಲ್ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಗಾರ್ಡ್ ಒಬ್ಬ ಫ್ಲಾಟ್ಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣ ಕೂಡ ವರದಿ ಆಗಿದೆ. ಅಪಾರ್ಟ್ಮಂಟ್ನಲ್ಲಿ ಒಂಬತ್ತು ವರ್ಷದಿಂದ ಕೆಲಸ ಮಾಡುತ್ತಿದ್ದ ಆರೋಪಿ ಶಿವರಾಜ್ ಕುಟುಂಬಸ್ಥರು ಮನೆಯಲ್ಲಿಲ್ಲ ಎಂಬುದನ್ನು ಅರಿತು ಕನ್ನ ಹಾಕಿ ನೇಪಾಳಕ್ಕೆ ಪರಾರಿಯಾಗಿದ್ದಾರೆ. ಸದ್ಯ ಈ ಪ್ರಕರಣ ಸಂಬಂದ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದಂಪತಿ ತೆರಳುತ್ತಿದ್ದ ಸ್ಕೂಟಿಗೆ ಗುದ್ದಿದ ಕಂಟೈನರ್: ಪತ್ನಿ ಸಾವು, ಪತಿ ಸ್ಥಿತಿ ಗಂಭೀರ