ಬೆಂಗಳೂರು: ಆಂಧ್ರಪ್ರದೇಶದ ಪೊಲೀಸರ ಸಮವಸ್ತ್ರ ಧರಿಸಿ ಹಾಡಹಗಲೇ 80 ಲಕ್ಷ ರೂ ಹಣ ರಾಬರಿ ಮಾಡಿದ್ದ ಮೂವರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 27ರಂದು ಮಧ್ಯಾಹ್ನ ಶಾಂತಿನಗರದ ಕೆ. ಎಚ್. ರಸ್ತೆಯ ಬಳಿ ಕಾರಿನಲ್ಲಿ ತೆರಳುತ್ತಿದ್ದ ಕುಮಾರಸ್ವಾಮಿ ಹಾಗೂ ಚಂದನ್ ಎಂಬವರನ್ನು ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟಿ 80 ಲಕ್ಷ ದರೋಡೆ ಮಾಡಿ ಪರಾರಿಯಾಗಿದ್ದ ಆರೋಪಿಗಳಾದ ಭತಲ್ ಶಿವರಾಮ ಕೃಷ್ಣ ಯಾದವ್ (19), ಶೇಕ್ ಚೆಂಪತಿ ಲಾಲ್ ಬಾಷಾ (36), ಶೇಕ್ ಚೆಂಪತಿ ಜಾಕೀರ್ (27) ನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಮಾಲೀಕ ಮೋಹನ್ ಎಂಬಾತನ ಆದೇಶದನ್ವಯ ಹಣ ಕೊಂಡೊಯ್ಯುತ್ತಿದ್ದ ಕುಮಾರಸ್ವಾಮಿ ಹಾಗೂ ಚಂದನ್ ಅವರನ್ನು ಕೆ.ಹೆಚ್. ರಸ್ತೆಯ ಬಳಿ ಪೊಲೀಸ್ ಎಂಬ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಬಂದು ಅಡ್ಡಗಟ್ಟಿದ್ದ ಆರೋಪಿಗಳು, ತಾವು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಕುಮಾರಸ್ವಾಮಿ ಹಾಗೂ ಚಂದನ್ ಅವರು ಇದ್ದ ಕಾರು ಹತ್ತಿದ್ದ ಆರೋಪಿಗಳು ತೆಲುಗು ಭಾಷೆಯಲ್ಲಿ ಅವರವರೇ ಮಾತನಾಡಿಕೊಂಡು ಲಾಠಿ ತೋರಿಸಿ ಕಾರಿನಲ್ಲಿದ್ದವರನ್ನು ಬೆದರಿಸಿದ್ದಾರೆ. ಬಳಿಕ ಅವರ ಬಳಿ ಇದ್ದ 80 ಲಕ್ಷ ಹಣವನ್ನು ಅವರಿಂದ ಪಡೆದು ಬಳಿಕ ತಮ್ಮ ಕಾರಿನಲ್ಲಿ ಅಲ್ಲಿಂದ ಪರಾರಿಯಾಗಿದ್ದರು.
ದೋಚಿದ ಹಣದಲ್ಲಿ ಅಂದರ್ - ಬಾಹರ್ ಆಟ:ಆರೋಪಿಗಳು ದೋಚಿದ್ದ 80 ಲಕ್ಷದಲ್ಲಿ ಸ್ವಲ್ಪ ಹಣವನ್ನು ಸಾಲ ತೀರಿಸಿ ಎರಡು ದಿನಗಳ ಬಳಿಕ ಬೆಂಗಳೂರಿಗೆ ವಾಪಸಾಗಿದ್ದರು. ಬೆಂಗಳೂರಿಗೆ ಬಂದ ಆರೋಪಿಗಳು ಖಾಸಗಿ ಹೋಟೆಲ್ ಒಂದರಲ್ಲಿ ಐದು ಲಕ್ಷ ಹಣದಲ್ಲಿ ಅಂದರ್ ಬಾಹರ್ ಆಟ ಆಡಿ ಒಂದು ಕೋಟಿ ಹಣ ಗೆದ್ದಿದ್ದರು. ಬಳಿಕ ಮತ್ತೊಂದು ಹೋಟೆಲ್‌ನಲ್ಲಿ ಅಂದರ್ ಬಾಹರ್ ಆಡಿ ಹಿಂದೆ ಆಡಿದ್ದ ಹೋಟೆಲ್‌ನಲ್ಲಿ ಗಳಿಸಿದ್ದ ಅದೇ ಒಂದು ಕೋಟಿಯನ್ನು ಕಳೆದುಕೊಂಡಿದ್ದರು. ಅಲ್ಲಿಂದ ನಂತರ ಆಂಧ್ರಪ್ರದೇಶಕ್ಕೆ ಹೋದವರು ಅಲ್ಲಿಯೂ ಅಂದರ್ ಬಾಹರ್ ಆಡುವ ಮೂಲಕ ಒಟ್ಟು 80 ಲಕ್ಷ ಹಣವನ್ನು ಕಳೆದುಕೊಂಡಿದ್ದರು.