ಬೆಂಗಳೂರು:ವ್ಯಾಪಾರ ಮುಗಿಸಿ ಮನೆಗೆ ಹೋಗುತ್ತಿದ್ದ ಜ್ಯೂವೆಲ್ಲರಿ ಅಂಗಡಿ ಮಾಲೀಕನ ಕಾರು ಅಡ್ಡಗಟ್ಟಿ ದರೋಡೆಕೋರರು 2 ಲಕ್ಷ ಹಣ ಹಾಗೂ 10 ಗ್ರಾಂ.ಚಿನ್ನದ ಸರ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ವಿಜಯನಗರದ ನಿವಾಸಿ ಪ್ರಮೋದ್ ಜೈನ್ ಹಣ ಕಳೆದುಕೊಂಡ ವ್ಯಾಪಾರಿ. ಈತ ಪೀಣ್ಯದ 2ನೇ ಹಂತದಲ್ಲಿರುವ ಚಿಕ್ಕಪ್ಪ ನೇಮಿಚಂದ್ ನಡೆಸುತ್ತಿರುವ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಡಿ.1ರಂದು ರಾತ್ರಿ ಜ್ಯೂವೆಲ್ಲರಿ ಅಂಗಡಿ ಬಂದ್ ಮಾಡಿ ವ್ಯಾಪಾರವಾಗಿದ್ದ 2 ಲಕ್ಷ ರೂ. ಹಣವನ್ನು ಟಿಫಿನ್ ಬ್ಯಾಗ್‌ನಲ್ಲಿ ತುಂಬಿಕೊಂಡು ಹೆಗ್ಗನಹಳ್ಳಿ ಮಾರ್ಗವಾಗಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಇವರ ಹಿಂದೆ ದ್ವಿಚಕ್ರವಾಹನದಲ್ಲಿ ನೇಮಿಚಂದ್ ಸಹ ಬರುತ್ತಿದ್ದರು.
ಆಗ ದ್ವಚಕ್ರ ವಾಹನದಲ್ಲಿ ಬಂದ ಮೂವರು ಅಪರಿಚಿತರು, ಪ್ರಮೋದ್ ಕಾರಿನ ಬಳಿ ಬಂದು ವಾಹನ ಸರಿಯಾಗಿ ಓಡಿಸು ಎಂದು ಬೆದರಿಸಿ ಮಾರಕಾಸ್ತ್ರದಿಂದ ಕಾರಿನ ಕಿಟಕಿ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಬಳಿಕ ಕಾರಿನಲ್ಲಿದ್ದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಆಗ ಆರೋಪಿಗಳನ್ನು ತಡೆಯಲು ಮುಂದಾದ ನೇಮಿಚಂದ್ಗೂ ಮಾರಕಾಸ್ತ್ರ ತೋರಿಸಿ ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಕಿ ಪಡೆ ಸ್ಥಳೀಯ ಸಿಸಿ ಕ್ಯಾಮೆರಾ ದೃಶ್ಯವಳಿಗಳನ್ನು ಪಡೆದು ಪರಿಶೀಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಒಮಿಕ್ರೋನ್ ಸೋಂಕಿತನ ಸಂಪರ್ಕದಲ್ಲಿದ್ದ ಐವರಿಗೆ ಕೋವಿಡ್..ರೂಪಾಂತರಿ ತಗುಲಿರುವ ಆತಂಕ