ಬೆಂಗಳೂರು:ಪೊಲೀಸರ ಸೋಗಿನಲ್ಲಿ ಉದ್ಯಮಿಯ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ಸಂಜೆ ವರದಿಯಾಗಿದೆ. ಪೀಣ್ಯದ ಹೆಚ್ಎಂಟಿ ಲೇಔಟ್‌ನಲ್ಲಿರುವ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿಯ ಮಾಲೀಕ ಮನೋಹರ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ.
ರಾತ್ರಿ 7.30ರ ವೇಳೆಗೆ ಮನೋಹರ್ ಮನೆಯಲ್ಲಿರಲಿಲ್ಲ. ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ದಿರಿಸಿನಲ್ಲಿ ಐದಾರು ಮಂದಿ ಅಪರಿಚಿತರು ಮನೆಗೆ ಬಂದಿದ್ದಾರೆ. ಕೌಟುಂಬಿಕ ಕಲಹ ನಡೆಯುತ್ತಿದ್ದುದರಿಂದ ಅದೇ ವಿಚಾರವಾಗಿ ಪೊಲೀಸರು ಬಂದಿರಬಹುದು ಎಂದು ಮನೆಯವರು ಅಂದುಕೊಂಡಿದ್ದರು. ಆದರೆ, ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ತಕ್ಷಣ ಡ್ರ್ಯಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದಾರೆ.