ಬೆಂಗಳೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಳೆದ ಮೂರು ವರ್ಷಗಳ ಅವಧಿಯಲ್ಲಿ 2,900 ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎನ್.ಎ. ಹ್ಯಾರಿಸ್ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರ ನೀಡಿದ ಜಲಸಂಪನ್ಮೂಲ ಸಚಿವರು, ಸಾರಿಗೆ ಸಂಸ್ಥೆಯು ನಷ್ಟ ಕಡಿಮೆ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದು, ಇಷ್ಟೊಂದು ನಷ್ಟ ಅನುಭವಿಸಲು ಕಾರಣ 2015 ರಿಂದ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವುದು. ಡೀಜಲ್ ಬೆಲೆ ಹೆಚ್ಚುತ್ತಿರುವುದು ಹಾಗೂ ಕೋವಿಡ್ ಕಾರಣ ಎಂದು ಸದನಕ್ಕೆ ಮಾಹಿತಿ ನೀಡಿದರು.
ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆ ಸರ್ಕಾರದ ಮುಂದಿಲ್ಲ...
ರಾಜ್ಯದಲ್ಲಿ ಗಾಣಿಗ ಸಮಾಜಕ್ಕೆ ಗಾಣಿಗ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುವ ಪ್ರಸ್ತಾವವು ಸರ್ಕಾರದ ಮುಂದೆ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ವಿಧಾನಸಭೆಯಲ್ಲಿ ಹೇಳಿದರು.
ಓದಿ:ಯುಎಇ, ಸೌದಿ ಅರೇಬಿಯಾ ಮೇಲಿನ ಕ್ಷಿಪಣಿ ದಾಳಿ ಖಂಡಿಸಿದ ಭಾರತ
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಆನಂದ್ ಸಿದ್ದು ನ್ಯಾಮಗೌಡರ ಪ್ರಶ್ನೆಗೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಪರವಾಗಿ ಜಲಸಂಪನ್ಮೂಲ ಸಚಿವರು ಉತ್ತರ ನೀಡಿ, ಈಗಾಗಲೇ 12 ನಿಗಮಗಳಿದ್ದು ಇದರಲ್ಲಿ 11 ಹಿಂದುಳಿದ ವರ್ಗಗಗಳ ನಿಗಮಗಳು ಹಾಗೂ ಒಂದು ಸಾಮಾನ್ಯ ವರ್ಗಕ್ಕೆ ಇರುವುದರಿಂದ ನಿಗಮ ಸ್ಥಾಪನೆಗೆ ಚಿಂತನೆ ನಡೆಸಿಲ್ಲ ಎಂದರು.
ಗಾಣಿಗ ಸಮುದಾಯವನ್ನು ಒಳಗೊಂಡಂತೆ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಯಲ್ಲಿರುವ ಜಾತಿ-ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಈಗಾಗಲೇ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಟಭಿವೃದ್ಧಿ ನಿಗಮದ ವತಿಯಿಂದ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿತ್ತಿದೆ. ಗಾಣಿಗ ಸಮುದಾಯಕ್ಕೆ ಯಾವುದೇ ಸಮಸ್ಯೆಗಳಿದ್ದರೂ ಸಹ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದಲೆ ಪರಿಹರಿಸಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು.