ಬೆಂಗಳೂರು:ಇಂದು ಬೆಳಗ್ಗೆಯಿಂದ ಕಾಂಗ್ರೆಸ್ ಗೋರಗುಂಟೆಪಾಳ್ಯ, ಜಾಲಹಳ್ಳಿ ಭಾಗದಲ್ಲಿ ಭರ್ಜರಿ ರೋಡ್ ಶೋ ನೆಡೆಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಆರ್.ಆರ್ ನಗರ ವಿಧಾನಸಭಾ ಪ್ರಚಾರದಲ್ಲಿ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಪರ ದೊಡ್ಡ ಮಟ್ಟದಲ್ಲಿ ಘಟಾನುಘಟಿ ನಾಯಕರು ಮತ ಬೇಟೆ ನಡೆಸಿದರು.
ಸಂಜೆಯವರೆಗೂ ನೆಡೆಯುವ ಪ್ರಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೊಡಗಿಸಿಕೊಂಡಿದ್ದು, ಚುನಾವಣಾ ಪ್ರಚಾರ ಕಾವೇರುತ್ತಿದೆ. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ತನ್ನ ವಿರೋಧಿಗಳನ್ನು ಹೆದರಿಸಿ, ಬೆದರಿಸಿ ತಾನು ಶಾಸಕನಾಗಬಹುದು ಎಂದು ಮುನಿರತ್ನ ಭಾವಿಸಿದ್ದರೆ, ಅವರಂಥ ಮೂರ್ಖ ಬೇರೊಬ್ಬರಿಲ್ಲ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿರಬೇಕು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅವರ ಪರ ಕೆಲಸ ಮಾಡಿದರೆ ಭವಿಷ್ಯದಲ್ಲಿ ಅವರು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಆರ್.ಆರ್. ನಗರ ಕ್ಷೇತ್ರದ ಅಭಿವೃದ್ಧಿಗೆ ರೂ.2,000 ಕೋಟಿ ಅನುದಾನ ನೀಡಿದ್ದೆ. ಆದರೂ ನಮಗೆ ದ್ರೋಹ ಮಾಡಿದ್ರಲ್ಲ ಮುನಿರತ್ನ ಅವರೇ, ಅಂತಹ ಅನ್ಯಾಯವನ್ನು ನಾವೇನು ಮಾಡಿದ್ವಿ ನಿಮ್ಗೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ಎಂಬ ಕಾರಣಕ್ಕೆ ಕ್ಷೇತ್ರದ ಜನತೆ ಮುನಿರತ್ನ ಅವರನ್ನು ಎರಡು ಬಾರಿ ಆಯ್ಕೆ ಮಾಡಿದರೇ ಹೊರತು ಅವರು ದೊಡ್ಡ ನಾಯಕರು ಎಂದಲ್ಲ. ನಾವೇನೂ ಅವರ ಕುತ್ತಿಗೆ ಹಿಡಿದು ಪಕ್ಷದಿಂದ ಹೊರ ದಬ್ಬಲಿಲ್ಲ. ಸ್ವಾರ್ಥಕ್ಕಾಗಿ ಅವರು ಬಿಜೆಪಿಗೆ ಹೋದರು. ಇಂಥಹವರು ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ವಾಗ್ದಾಳಿ ನಡೆಸಿದರು.
ಮುನಿರತ್ನ ಅವರದ್ದು ಬ್ಲಾಕ್ಮೇಲ್ ರಾಜಕೀಯ. ತಮಗಾಗಿ ದುಡಿಯುವ ಕಾರ್ಯಕರ್ತರ ಮೇಲೆಯೇ ವಿರುದ್ಧ ಕೇಸು ಹಾಕಿಸುವುದು ಅವರ ಅಭ್ಯಾಸ. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸಾವಿರಾರು ಸುಳ್ಳು ಕೇಸ್ಗಳನ್ನು ಮುನಿರತ್ನ ಹಾಕಿಸಿದ್ದಾರೆ ಎಂದು ಆರೋಪಿಸಿದರು.
ಮೋದಿ ಮೋದಿ ಎಂದು ಕೂಗುವ ಯುವಕರಿಗೆ ನರೇಂದ್ರ ಮೋದಿಯವರು ಮೂರು ನಾಮ ಹಾಕಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಪ್ರಧಾನಿ ಮೋದಿ. ಈಗ ಇದ್ದ ಉದ್ಯೋಗ ಕಳೆದುಕೊಂಡು ಯುವಕರು ಬೀದಿ ಪಾಲಾಗಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಲು ಹೋಗಿ ಎನ್ನುತ್ತಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.