ಕರ್ನಾಟಕ

karnataka

ETV Bharat / state

ಬೆಂಗಳೂರು: ಸುರಕ್ಷಿತ ರಸ್ತೆ ನಿರ್ಮಿಸಲು 'ನಮ್ಮ ರಸ್ತೆ' ಪ್ರದರ್ಶನ ಕಾರ್ಯಾಗಾರ - ಪಾದಚಾರಿ ಮಾರ್ಗ

ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ನಡೆದ ನಮ್ಮ ರಸ್ತೆ ಪ್ರದರ್ಶನ, ಕಾರ್ಯಾಗಾರಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.

Our roadshow workshop was held in Bangalore
ಬೆಂಗಳೂರಿನಲ್ಲಿ ನಮ್ಮ ರಸ್ತೆ ಪ್ರದರ್ಶನ ಕಾರ್ಯಗಾರ ನಡೆಯಿತು

By ETV Bharat Karnataka Team

Published : Dec 8, 2023, 9:50 PM IST

ಬೆಂಗಳೂರು: ಬ್ಲೂಮ್‌ಬರ್ಗ್ ಫಿಲಾಂತ್ರಪಿಸ್ ಇನೀಶಿಯೇಟಿವ್ ಹಾಗೂ ಡಬ್ಲ್ಯುಆರ್‌ಐ ಇಂಡಿಯಾ ಸಹಭಾಗಿತ್ವದಲ್ಲಿ 2 ದಿನಗಳ ಕಾಲ ಬಿಬಿಎಂಪಿ ಕೇಂದ್ರ ಕಚೇರಿ ಡಾ.ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ನಡೆದ ನಮ್ಮ ರಸ್ತೆ (ನಮ್ಮ ಬೀದಿಗಳು) ಪ್ರದರ್ಶನ ಕಾರ್ಯಾಗಾರಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ಕೊಟ್ಟಿದ್ದಾರೆ.

ಬಳಿಕ ಮಾತನಾಡಿದ ತುಷಾರ್ ಗಿರಿನಾಥ್, ನಮ್ಮ ರಸ್ತೆ ಪ್ರದರ್ಶನ ಹಾಗೂ ಕಾರ್ಯಾಗಾರವನ್ನು ಒಳ್ಳೆಯ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಉಪಯೋಗಿಸುವ ರಸ್ತೆ, ಪಾದಚಾರಿ ಮಾರ್ಗಗಳನ್ನು ನಾಗರಿಕರ ಸುರಕ್ಷತೆಯ ದೃಷ್ಟಿಯಲ್ಲಿಟ್ಟುಕೊಂಡು ವಿನ್ಯಾಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಬಂದಂತಹ ಉತ್ತಮ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಂಡು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಬೆಂಗಳೂರಿನ ರಸ್ತೆಗಳನ್ನು ನಾಗರಿಕ ಬಳಕೆದಾರರಿಗೆ ಸುರಕ್ಷಿತವಾಗಿರಿಸಲು, ಎಲ್ಲ ತರಹದ ಬಳಕೆದಾರರಿಗೆ ಉಪಯೋಗಿಸುವಂತಾಗಲು, ಸ್ಥಿತಿ ಸ್ಥಾಪಕವಾಗಿಸಲು ಬೇಕಾದ ಎಲ್ಲ ಪರಿಹಾರಗಳನ್ನು ಆಲೋಚಿಸಲು ಹಾಗೂ ಸಲಹೆಗಳನ್ನು ಪಡೆಯಲು ಸೇರಿದಂತೆ ಇನ್ನಿತರ ಚರ್ಚೆಗಳು ಸಮಾವೇಶದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

'ನಮ್ಮ ರಸ್ತೆ' ಎಂಬ ವಿಶಿಷ್ಟ ಅಭಿಯಾನವು ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಮಾಡಲು ಸಾಕಷ್ಟು ಸಹಕಾರಿಯಾಗಲಿದೆ. ಇದರಿಂದ ಬೆಂಗಳೂರಿನಲ್ಲಿ ಸಕ್ರಿಯ ಸಾರಿಗೆ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸಲು, ಪಾದಚಾರಿಸ್ನೇಹಿ ಬೀದಿಗಳು, ಸೈಕ್ಲಿಂಗ್​ಗಾಗಿಯೇ ಮೀಸಲಾದ ಪ್ರತ್ಯೇಕ ಲೇನ್‌ಗಳು ಮತ್ತು ಹಸಿರುಮಯವಾದ ಸ್ಥಳಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ನಗರದಲ್ಲಿ ಸುರಕ್ಷಿತ ರಸ್ತೆಗಳನ್ನು ಸಿದ್ಧಪಡಿಸುವ ಸಲುವಾಗಿ ಕಾರ್ಯಾಗಾರದಲ್ಲಿ ಅನುಭವಗಳನ್ನು ಹಂಚಿಕೊಳ್ಳಲು ನಾಗರಿಕರು, ನಾಗರಿಕ ಸಂಸ್ಥೆಗಳು, ವಿನ್ಯಾಸಕರು, ವಿವಿಧ ಶೈಕ್ಷಣಿಕ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿರಲಿದ್ದು, ಸಮಾವೇಶದಲ್ಲಿ ಎರಡು ದಿನ ಕಾಲ ಪಾಲಿಕೆಯ ಎಂಜಿನಿಯರ್​ಗಳ ತರಬೇತಿ ಕಾರ್ಯಾಗಾರ ಕೂಡಾ ನಡೆಯಲಿದೆ ಎಂದು ಹೇಳಿದರು.

ಮೆಟ್ರೋ ಜಾಲ, ಉಪನಗರ ರೈಲು ಸೌಲಭ್ಯಗಳು ಮತ್ತು ಬಸ್‌ಗಳ ಸೇವೆಗಳ ತ್ವರಿತ ವಿಸ್ತರಣೆಯೊಂದಿಗೆ ಬೆಂಗಳೂರು ನಿರ್ಣಾಯಕ ಹಂತದಲ್ಲಿದೆ. ಈ ಎಲ್ಲ ಪ್ರಯತ್ನಗಳ ಯಶಸ್ಸು ಸಂಪೂರ್ಣ ಸಂಪರ್ಕಿತ ಸಾರಿಗೆ ವ್ಯವಸ್ಥೆಗಳು ಮತ್ತು ಪಾದಚಾರಿ ಮೂಲಸೌಕರ್ಯಗಳ ಯೋಜನೆ, ವಿನ್ಯಾಸ ಮತ್ತು ಕಾರ್ಯಾಚರಣೆ ಗೊಳಿಸುವಿಕೆ ಮೇಲೆ ಅವಲಂಬಿತವಾಗಿರುತ್ತದೆ.

ಅಂಥ ಸುಯೋಜಿತ ವ್ಯವಸ್ಥೆ ಜನರನ್ನು ಒಂದು ಸಾರಿಗೆ ವಿಧಾನದಿಂದ ಇನ್ನೊಂದು ಸಾರಿಗೆ ವಿಧಾನಕ್ಕೆ ಸರಳ ಮತ್ತು ಸುರಕ್ಷಿತವಾಗಿ ಬದಲಾಯಿಸಲು ಅನುಕೂಲ ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಚರ್ಚಿಸಿ ಬಂದಂತಹ ಉತ್ತಮ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಪಾಲಿಕೆಯು ಸುರಕ್ಷಾ 75 ಮಿಷನ್ 2023 ರಡಿ ನಗರದ 75 ನಿರ್ಣಾಯಕ ಜಂಕ್ಷನ್‌ಗಳಲ್ಲಿ ಮರು ವಿನ್ಯಾಸಗಳನ್ನು ಮಾಡುತ್ತಿದ್ದು, ಅಭಿವೃದ್ಧಿಯ ಕಾರ್ಯ ಪ್ರಗತಿಯಲ್ಲಿದೆ. ಇದು ಜನರ ಕೇಂದ್ರಿತ ಜಂಕ್ಷನ್ ವಿನ್ಯಾಸಗಳನ್ನು ರಚಿಸುವ ಗುರಿಯನ್ನು ಹೊಂದಿದ್ದು, ಇದರಿಂದ ಸುರಕ್ಷಿತ, ಪರಿಣಾಮಕಾರಿ ಮತ್ತು ಸುಲಲಿತವಾಗಿ ಪ್ರವೇಶಿಸುವಂತೆ ಮಾಡುತ್ತದೆ ಎಂದರು.

ಸರಳ ವಿನ್ಯಾಸ ಪರಿಣಾಮಗಳು: ರಸ್ತೆಗಳ ಮಧ್ಯೆ ಇರುವ ಸ್ಥಳವನ್ನು ಆಶ್ರಯ ದ್ವೀಪ ಮಾಡುವುದು, ಸ್ಪೀಡ್ ಹಂಪ್​ಗಳ ನಿರ್ಮಾಣ, ರಸ್ತೆಗಳ ಮಾರ್ಕಿಂಗ್, ರಸ್ತೆಯ ಮೀಡಿಯನ್ ಭಾಗದಲ್ಲಿ ಪಾದಚಾರಿಗಳು ನಿಲ್ಲಲು ವ್ಯವಸ್ಥೆ, ನಾಗರಿಕರ ಅನುಕೂಲಕ್ಕಾಗಿ ಸೈನೇಜ್‌ಗಳ ಅಳವಡಿಕೆ, ಎತ್ತರದ ಪಾದಚಾರಿ ಕ್ರಾಸಿಂಗ್, ಮಲ್ಟಿ ಯುಟಿಲಿಟಿ ಸೈಡ್ ವಾಕ್ ಜೋನ್, ರಸ್ತೆ ಬದಿಯ ಕಟ್ಟಡ ಪ್ರವೇಶದ ಬಳಿ ಸುರಕ್ಷಿತ ವಿನ್ಯಾಸ, ಕಾಂಪ್ಯಾಕ್ಟ್ ಇಂಟರ್ ಸೆಕ್ಷನ್‌ಗಳ ನಿರ್ಮಾಣ, ವಾಹನಗಳ ವೇಗ ನಿಯಂತ್ರಿಸಲು ರಂಬಲ್ ಸ್ಟ್ರಿಪ್ಸ್ ಅಳವಡಿಕೆ, ಬಸ್ ತಂಗುದಾಣಗಳ ನಿರ್ಮಾಣ ಹೀಗೆ ದೊಡ್ಡ ಸಮಸ್ಯೆಗಳಿಗೆ ಸರಳ ವಿನ್ಯಾಸಗಳನ್ನು ಕೈಗೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ಲೋಬಲ್ ಅರ್ಬನ್ ಮೊಬಿಲಿಟಿಯ ಉಪನಿರ್ದೇಶಕರು, ಆರೋಗ್ಯ ಮತ್ತು ರಸ್ತೆ ಸುರಕ್ಷತೆಯ ನಿರ್ದೇಶಕರು, ಸುಸ್ಥಿರ ನಗರಗಳಿಗಾಗಿ ರಾಸ್ ಸೆಂಟರ್ ನ ಕ್ಲೌಡಿಯಾ ಆಡ್ರಿಯಾಜೋಲಾ-ಸ್ಟೀಲ್, ಜಾಗತಿಕ ರಸ್ತೆ ಸುರಕ್ಷತೆಗಾಗಿ ಬ್ಲೂಮ್‌ಬರ್ಗ್ ಫಿಲಾಂತ್ರಪೀಸ್ ಇನೀಶಿಯೇಟಿವ್ ನ ವೈಟಲ್ ಸ್ಟ್ರಾಟಜೀಸ್(ರಸ್ತೆ ಸುರಕ್ಷತೆ) ಹಿರಿಯ ವ್ಯವಸ್ಥಾಪಕಿ ಲೀವಾಂಟಾ ಮಿಲ್ಲರ್, ಎಂಜಿನಿಯರಿಂಗ್ ವಿಭಾಗದ ಪ್ರಧಾನ ಅಭಿಯಂತರ ಪ್ರಹ್ಲಾದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂಓದಿ:ನನ್ನ 3ನೇ ಅವಧಿಯಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ: ಮೋದಿ

ABOUT THE AUTHOR

...view details