ಬೆಂಗಳೂರು: ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ 8615 ಬೂತ್ ಗಳಿದ್ದು, 2217 ಬೂತ್ ಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಎಲ್ಲ ಬೂತ್ ಗಳಲ್ಲಿ ಅಂಗವಿಕಲರು ಬಂದು ಹೋಗಲು ಪ್ರತ್ಯೇಕ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್, ಪೀಠೋಪಕರಣಗಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು ಇರಲಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬುಧವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಚುನಾವಣಾ ಅಧಿಕಾರಿಯ ಹಾಗೂ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಮುಖ್ಯ ಚುನಾವಣಾ ಆಯೋಗ ವಿಧಾನಸಭೆ ದಿನಾಂಕ ಘೋಷಿಸಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ನಗರ ವ್ಯಾಪ್ತಿಯ 28 ಕ್ಷೇತ್ರಗಳಿಗೆ ಆರ್ಓ ಎಆರ್ಓ ನೇಮಕ ಮಾಡಲಾಗಿದೆ ಎಂದು ಹೇಳಿದರು.
ಚುನಾವಣಾ ಕರ್ತವ್ಯದಲ್ಲಿರುವ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಚುನಾವಣಾ ತರಬೇತಿ ನೀಡಲಾಗಿದೆ. ಈಗಾಗಲೇ ಚುನಾವಣೆಗೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಡೆ ಜಾಗದ ಕೊರತೆ ಇತ್ತು. ಇದನ್ನು ನಿವಾರಿಸಲಾಗಿದೆ. ಆರ್ಓ ಎಆರ್ಓಗಳು ಆಯಾ ವಿಧಾನಸಭಾ ಕ್ಷೇತ್ರದ ಎಲ್ಲ ಕೆಲಸಗಳಿಗೆ ಜವಬ್ದಾರರಾಗುತ್ತಾರೆ. ಜಿಲ್ಲಾಮಟ್ಟದಲ್ಲಿ ಮೇಲ್ಮಟ್ಟದ ಸಮಿತಿ ಇರಲಿದೆ ಎಂದು ತಿಳಿಸಿದರು.
ಸೂಕ್ಷ್ಮ ಪ್ರದೇಶದಲ್ಲಿ ಇಬ್ಬರು ಅಧಿಕಾರಿಗಳು: ಸೂಕ್ಷ್ಮ ಪ್ರದೇಶದಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ನಮ್ಮ ರಾಜ್ಯದಲ್ಲೇ ಇರುವ ಅಧಿಕಾರಿಗಳನ್ನು ಕೂಡ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಉಳಿದಂತೆ ಚುನಾವಣೆಯ ದಿನ ಮೈಕ್ರೋ ಅಬ್ಸವರ್ಸ್, ವಿಡಿಯೋ ಕವರಜ್ ಕೂಡ ಮಾಡಲಾಗುತ್ತದೆ ಎಂದರು.
ಮತದಾರರ ಪಟ್ಟಿ ತಿದ್ದುಪಡಿಗೆ ಅವಕಾಶ: ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 95,13,830 ಮತದಾರರಿದ್ದಾರೆ. ಇದರಲ್ಲಿ 49,26,270 ಪುರುಷ ಮತದಾರರಾಗಿದ್ದು, 45,85,824 ಮಹಿಳಾ ಮತದಾರರು ಇದ್ದಾರೆ. 18 ರಿಂದ 19 ವಯಸ್ಸಿನ 1,08,494 ಮತದಾರರು ಸೇರ್ಪಡೆಯಾಗಿದ್ದಾರೆ. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 2,36,719 ಇದೆ. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಮನ್ವಯದಲ್ಲಿ ಬೆಂಗಳೂರು ನಗರ ಜಿಲ್ಲೆಯ ಬಹುತೇಕ ಎಲ್ಲಾ ತೃತೀಯ ಲಿಂಗಿ ಮತದಾರರ ನೋಂದಣಿ ಕಾರ್ಯ ಯಶಸ್ವಿಯಾಗಿದೆ.
9182 ಮತದಾರರ ಪೈಕಿ 9125 ಮತದಾರರು ನೋಂದಣಿಯಾಗಿದ್ದರೆ, 42 ಮತದಾರರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕೇವಲ 15 ಜನರ ನೋಂದಣಿಗೆ ಬಾಕಿ ಉಳಿದಿದೆ. ನಾಮಿನೇಷನ್ ಮಾಡುವ ದಿನದವರೆಗೂ ಮತದಾರರ ಪಟ್ಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು ಎಂದು ಮಾಹಿತಿ ನೀಡಿದರು.