ಬೆಂಗಳೂರು :ದೇಶದ ಪ್ರತಿ ಮೂವರಲ್ಲಿ ಒಬ್ಬರು ಮಧುಮೇಹ ರೋಗಕ್ಕೆ ತುತ್ತಾಗಿರುವವರಿದ್ದಾರೆ. ಅಲ್ಲದೇ, ಯುವ ಪೀಳಿಗೆಯಲ್ಲೂ ಮಧುಮೇಹ ಕಳವಳಕಾರಿಯಾಗಿ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆಯನ್ನು ಪಾಲಿಸಬೇಕು ಎಂದು ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಇಂದು ನಗರದ ತಿಮ್ಮಯ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬೆಂಗಳೂರು ಡಯಾಬಿಟೀಸ್ ಮತ್ತು ಐ ಆಸ್ಪತ್ರೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಮಧುಮೇಹದಿಂದ ಬಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹ ಕಣ್ಣು ಮತ್ತು ಕಿಡ್ನಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಇದನ್ನು ನಿಯಂತ್ರಿಸುವುದು ಇಂದಿನ ಪರಿಸ್ಥಿತಿಗೆ ಅತ್ಯಗತ್ಯವಾಗಿದೆ. ಯುವಜನತೆಯಲ್ಲೂ ಇತ್ತೀಚೆಗೆ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಇದನ್ನು ತಡೆಯಬೇಕಾದರೆ ಆರೋಗ್ಯ ತಪಾಸಣೆ ಜೊತೆಗೆ ವೈದ್ಯರು ನೀಡುವಂತ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್ಲರಿಗೂ ಆರೋಗ್ಯ ಎಂಬ ಡಬ್ಲ್ಯೂಹೆಚ್ಓ ಗುರಿಯನ್ನು ಸಾಧಿಸಲು, ಎಲ್ಲರಿಗೂ ತ್ವರಿತವಾಗಿ ಸುಲಭ ಮತ್ತು ಕೈಗೆಟುಕುವ ಆರೋಗ್ಯ ಸೇವೆಯನ್ನು ಪೂರೈಸಲು, ಸರಿಯಾದ ರೋಗಿಗಳ ಆರೈಕೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವ ಶ್ರದ್ಧಾ ಐ ಕೇರ್ ಟ್ರಸ್ಟ್ ಮತ್ತು ಡಯಾಬಿಟಿಸ್ ಕ್ಲಬ್ ಗೆ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿನಂದಿಸಿದರು.
ಈ ಸಂಸ್ಥೆಗಳು ರಾಜ್ಯದ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಅವರ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಇದನ್ನು ಮುಂದುವರೆಸಿರುವುದು ಶ್ಲಾಘನೀಯ. ಈ ಸಂಸ್ಥೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉಚಿತ ಮಧುಮೇಹ ಚಿಕಿತ್ಸಾಲಯವಾಗಿದೆ ಎಂದು ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
ಬಳಿಕ ಶ್ರದ್ಧಾ ಐ ಕೇರ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಶ್ರೀಗಣೇಶ್ ಮಾತನಾಡಿ, 2005 ರಿಂದ 3500 ಆರೋಗ್ಯ ಶಿಬಿರಗಳ ಮೂಲಕ ಸುಮಾರು 4.5 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆಯನ್ನು ನೀಡಿದ್ದೇವೆ. ಅದರಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ಮಾಡಿರುವುದು ನಮ್ಮ ಸಾಧನೆಯಾಗಿದೆ. ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಿರುವುದು ನಮ್ಮ ಹೆಗ್ಗಳಿಕೆಯಾಗಿದೆ.
ಮಧುಮೇಹ ಮತ್ತು ಅದರಿಂದ ಆಗುವ ಕಣ್ಣಿನ ಮೇಲಿನ ದುಷ್ಪರಿಣಾಮವನ್ನು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿದೆ. ರಾಜ್ಯದ ಪ್ರಮುಖ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಕೈಜೋಡಿಸಿದ್ದು ಬಹಳ ಸಂತಸದ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಜನರಿಗೆ ಕೈಗಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡಲಿದ್ದೇವೆ ಎಂದು ಹೇಳಿದರು.
ಶ್ರದ್ಧಾ ಐ ಕೇರ್ ಟ್ರಸ್ಟಿನ ಟ್ರಸ್ಟಿ ಹಾಗು ಅಂತಾರಾಷ್ಟ್ರೀಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಮಾತನಾಡಿ, ಸಮಾಜದ ಎಲ್ಲಾ ವರ್ಗದವರಿಗೂ ಒಳ್ಳೆಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಯಾವುದೇ ವರ್ಗದ ಜನರೂ ಮಧುಮೇಹದ ದುಷ್ಪರಿಣಾಮಗಳಿಗೆ ತುತ್ತಾಗಬಾರದು. ಅದರ ಬಗ್ಗೆ ಜಾಗೃತಿ ಹಾಗೂ ಅಗತ್ಯವಿರುವ ಕಡೆಯಲ್ಲಿ ಚಿಕಿತ್ಸೆಯನ್ನು ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಬಿ ದಯಾನಂದ, ಶ್ರದ್ಧಾ ಐ ಕೇರ್ ಟ್ರಸ್ಟ್ ನ ಸ್ಥಾಪಕ ಟ್ರಸ್ಟಿ ಡಾ.ಸುಮನ್ ರಾಮಸ್ವಾಮಿ, ಶ್ರದ್ದಾ ಐ ಕೇರ್ ಟ್ರಸ್ಟನ ಟ್ರಸ್ಟಿಗಳಾದ ದಿಲೀಪ್ ಸುರಾನಾ, ಕೆ.ಜಿ ರಾಘವನ್, ಡಯಾಬಿಟೀಸ್ ಕ್ಲಬ್‌ನ ಅಧ್ಯಕ್ಷ ಡಾ. ಅನಿಲ್ ಕುಮಾರ್, ಕಾರ್ಯದರ್ಶಿ ಡಾ. ಕಾರ್ತಿಕ್ ಮುನಿಚೂಡಪ್ಪ ಉಪಸ್ಥಿತರಿದ್ದರು.
ಇದನ್ನೂ ಓದಿ :ವೀಳ್ಯದೆಲೆಗೆ ಬಾಧಿಸಿದ ಹೊಸ ರೋಗ; ದಾವಣಗೆರೆ ಬೆಳ್ಳೊಡಿ ರೈತರು ಕಂಗಾಲು