ಬೆಂಗಳೂರು :ನಿಖಿಲ್ ಕುಮಾರ ಸ್ವಾಮಿ ಅಭಿನಯದ ಬಹು ನಿರೀಕ್ಷಿತ ಚಿತ್ರ ರೈಡರ್ ಕಳೆದ ಶುಕ್ರವಾರ( ಡಿಸೆಂಬರ್ 24) ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಒಂದೇ ದಿನಕ್ಕೆ ಚಿತ್ರ ಇಂಟರ್ನೆಟ್ ಅಲ್ಲಿ ಸೋರಿಕೆಯಾಗಿರುವ ಕುರಿತು ದೂರುಗಳು ಕೇಳಿ ಬಂದಿದ್ದವು.
ಪೈರಸಿ ಮಾಡಿ ಕೆಲ ಕಿಡಿಗೇಡಿಗಳು ಜಾಲತಾಣದಲ್ಲಿ ಹಚ್ಚಿಕೊಂಡಿದ್ದರ ಕುರಿತು, ನಾಯಕ ನಟ ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ಲಹರಿ ವೇಲು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ನಿರ್ಮಾಪಕ ಲಹರಿ ವೇಲು ಉತ್ತರ ವಿಭಾಗದ ಯಶವಂತಪುರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೊರು ನೀಡಿದ್ದಾರೆ. ಪೈರಸಿ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಪೈರಸಿ ವಿರುದ್ಧ ಕಠಿಣ ಕಾನೂನು ಈಗಾಗಲೇ ಇದೆ, ಆದರೂ ದೃಷ್ಟ ಬುದ್ದಿಯುಳ್ಳ ಜನರು ಕೃತ್ಯವನ್ನು ಮುಂದುವರೆಸಿದ್ದಾರೆ. ಸಿನೆಮಾ ಬಿಡುಗಡೆ ಆಗಿ ಒಂದೇ ಗಂಟೆಯಲ್ಲಿ ಪೈರಸಿ ಮಾಡುತ್ತಾರೆ. ಇಂತಹ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಿಡಿಗೇಡಿಗಳು ಇನ್ನೂ ಹೆಚ್ಚು ಚಿತ್ರಗಳನ್ನು ಈ ರೀತಿ ಪೈರಸಿ ಮಾಡಿ ನಿರ್ಮಾಪಕರನ್ನು, ಚಿತ್ರರಂಗವನ್ನು ಬೀದಿಗೆ ತರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೈರಸಿ ಕುರಿತು ನಿಖಿಲ್ ಕುಮಾರಸ್ವಾಮಿ ಕೂಡ ಮಾತನಾಡಿ, ಇಂಟರ್ನೆಟ್ನಲ್ಲಿ ಬಂದರೂ ಥಿಯೇಟರ್ ನಲ್ಲಿ ಸಿನಿಮಾ ಬಂದು ನೋಡಿ. ನಿರ್ಮಾಪಕರಿಗೆ ಹೆಚ್ಚಿನ ಹಾನಿ ಆಗುವುದನ್ನು ತಪ್ಪಿಸಿ ಎಂದು ಜನತೆಗೆ ಮನವಿ ಮಾಡಿದ್ದರು. ಸರ್ಕಾರ ಮತ್ತು ಪೊಲೀಸ್ ಇಲಾಖೆ ಕೂಡ ಪೈರಸಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.