ಬೆಂಗಳೂರು:ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ ಮಾಡುತ್ತಿರುವ ಅಂಗಡಿಗಳ ಮೇಲೆ ಯಲಹಂಕ ತಹಶೀಲ್ದಾರರು ಹಾಗೂ ಆರೋಗ್ಯ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ತಹಶೀಲ್ದಾರ ರಘು ಮೂರ್ತಿ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಜೊತೆಯಲ್ಲಿ ನೂರಾರು ವಿದ್ಯಾರ್ಥಿಗಳು, 'ತಂಬಾಕು ಚಟ ಕೌಟುಂಬಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ತಂಬಾಕನ್ನು ಯಾರೂ ಸೇವನೆ ಮಾಡಬಾರದು' ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಯಲಹಂಕದ ಬೀದಿ ಬೀದಿಗಳಲ್ಲಿ ತಂಬಾಕು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ವೇಳೆ ನಗರದ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಾಲೂಕು ದಂಡಾಧಿಕಾರಿ ರಘು ಮೂರ್ತಿ ಹಾಗೂ ತಾಲೂಕಿನ ಆರೋಗ್ಯ ಅಧಿಕಾರಿ ರಮೇಶ್ ದಾಳಿ ನಡೆಸಿದರು.
ಇದೇ ವೇಳೆ ಅಂಗಡಿಗಳಿಂದ ಸಾವಿರಾರು ರೂ. ಬೆಲೆ ಬಾಳುವ ತಂಬಾಕನ್ನು ವಶಕ್ಕೆ ಪಡೆದುಕೊಂಡು, ಅಂಗಡಿ ಮಾಲೀಕರಿಗೆ ದಂಡ ಹಾಕಿದರು. ಇದಲ್ಲದೇ ವಾರಕ್ಕೆ ಒಂದು ದಿನ ಈ ರೀತಿ ತಾಲೂಕಿನಾದ್ಯಂತ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು. ಈ ಮೂಲಕ ತಂಬಾಕು ಮಾರಾಟವನ್ನು ನಿಲ್ಲಿಸಲಾಗುತ್ತದೆ. ಇದರ ಜೊತೆಯಲ್ಲಿ ಸಾರ್ವಜನಿಕರು ಕೂಡ ತಂಬಾಕು ಸೇವನೆಯಿಂದ ದೂರ ಉಳಿದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಹಶೀಲ್ದಾರರಾದ ರಘು ಮುರ್ತಿ ಮನವಿ ಮಾಡಿಕೊಂಡರು.