ಬೆಂಗಳೂರು :ಕೋವಿಡ್-19 ಸೋಂಕಿತರಿಗಾಗಿ ಸರ್ಕಾರದ ವಶಕ್ಕೆ ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಈವರೆಗೂ ನೀಡದ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ನಗರದ ಕೋವಿಡ್ ಕೇರ್ ಕೇಂದ್ರಗಳ ಉಸ್ತುವಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಸಿಎಂ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾಧಿಕಾರಿಗಳ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸಕಾಲಕ್ಕೆ ಸರ್ಕಾರಕ್ಕೆ ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳು ಹಾಸಿಗೆಗಳನ್ನು ಹಸ್ತಾಂತರ ಮಾಡದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ಅವರು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆಂದು ದೂರಿದರು. ಸರ್ಕಾರ ಸೇರಿ ಪ್ರತಿಯೊಬ್ಬರೂ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವಾಗ ಕೆಲವರು ಮಾತ್ರ ಹಾಸಿಗೆಗಳನ್ನು ನೀಡದೇ ಸತಾಯಿಸುತ್ತಿರುವುದು ಸರಿಯಲ್ಲ.
ಇವರಿಗೆ ಕಾನೂನಿನ ಬಿಸಿ ಮುಟ್ಟಿಸಬೇಕಾಗಿದೆ ಎಂದ ಅವರು, ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರಹಿತ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ಅದರಲ್ಲೂ ಉಸಿರಾಟದ ತೊಂದರೆ, ಮತ್ತಿತರೆ ತುರ್ತು ಸಮಸ್ಯೆಗಳಿರುವ ಹಿರಿಯ ನಾಗರಿಕರಿಗೆ ಅಂಥ ಕಡೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ಅಂಶವನ್ನು ಡಿಸಿಎಂ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸಿಎಂಗೆ ಒತ್ತಾಯ ವೈದ್ಯರ ಕೊರತೆ :ಬೆಂಗಳೂರಿನಂತಹ ಮಹಾನಗರದಲ್ಲಿ ವೈದ್ಯರು, ನರ್ಸ್ಗಳು ಹಾಗೂ ಪೂರಕ ಸಿಬ್ಬಂದಿಯ ಕೊರತೆ ಕಂಡು ಬರುತ್ತಿದೆ. ಇಷ್ಟೊಂದು ಪ್ರಮಾಣದಲ್ಲಿ ವೈದ್ಯರು ವಾಸ ಮಾಡುತ್ತಿರುವ ಈ ನಗರದಲ್ಲೇ ಈ ಸಮಸ್ಯೆ ಆಗಬಾರದಿತ್ತು. ಕೂಡಲೇ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಬಿಬಿಎಂಪಿ ಇತ್ತ ಗಮನ ಹರಿಸಿ ತುರ್ತು ಕ್ರಮಕೈಗೊಂಡ್ರೆ ಅನುಕೂಲವಾಗುತ್ತದೆ. ಇಲ್ಲವಾದ್ರೆ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಾದ್ರೆ ಮುಂದೆ ಸಮಸ್ಯೆಯಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಎಚ್ಚರಿಸಿದರು.
ಟೆಸ್ಟ್ ಫಲಿತಾಂಶ ಬೇಗ ಸಿಗಲಿ : ಸದ್ಯಕ್ಕೆ ಕೋವಿಡ್ ಟೆಸ್ಟ್ ಫಲಿತಾಂಶ ಬರುತ್ತಿರುವುದು ಕೊಂಚ ತಡವಾಗುತ್ತಿದೆ. ಪಶ್ಚಿಮ ವಿಭಾಗದಲ್ಲಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇವೆ. ಐಸಿಎಂಆರ್ ಪೋರ್ಟಲ್ನಿಂದ ಬರುವ ಫಲಿತಾಂಶಗಳನ್ನು ಟ್ರ್ಯಾಕ್ ಮಾಡಿ ಆ ಪೋರ್ಟಲ್ ನಿಂದಲೇ ಫಲಿತಾಂಶವನ್ನು ಪಡೆಯಬೇಕು. ಇದರಿಂದ ಸೋಂಕಿತರಿಗೆ ಬೇಗ ಮಾಹಿತಿ ತಿಳಿಯುತ್ತದೆ. ಈ ವಿಷಯವನ್ನು ಪಾಲಿಕೆ ಆಯುಕ್ತರ ಗಮನಕ್ಕೂ ತಂದಿದ್ದೇನೆ. ಹೀಗೆ ಮಾಡುವುದರಿಂದ ಸಮಯ ವ್ಯರ್ಥವಾಗುವುದು ತಪ್ಪುತ್ತದೆ. ಪಾಸಿಟಿವ್ ರೋಗಿಗಳನ್ನು ತಕ್ಷಣ ಸಂಪರ್ಕಿಸಿ ಅವರಿಗೆ ರಿಸಲ್ಟ್ ತಿಳಿಸುವ ಕೆಲಸ ಸುಲಭವಾಗುತ್ತದೆ. ಅವರನ್ನು ಕೋವಿಡ್ ಕೇರ್‌ಗೆ ಶಿಫ್ಟ್ ಮಾಡಬೇಕೆ ಅಥವಾ ಆಸ್ಪತ್ರೆಗೆ ಕಳಿಸಬೇಕೆ ಎಂಬುದು ತಿಳಿಯುತ್ತದೆ ಎಂದು ಡಿಸಿಎಂ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಹೋಮ್ ಕೇರ್ ಹೆಲ್ಪ್‌ಲೈನ್ :ಬೆಂಗಳೂರು ತುಂಬಾ ದೊಡ್ಡ ನಗರ. ಹೀಗಾಗಿ ಹೋಮ್ ಕೇರಿನಲ್ಲಿರುವ ರೋಗಿಗಳಿಗೆ ಪ್ರತ್ಯೇಕ ಹೆಲ್ಪ್ ಲೈನ್ ಆರಂಭಿಸಬೇಕಾದ ಅಗತ್ಯವಿದೆ. ಇದು ತಕ್ಷಣ ಆರಂಭವಾದ್ರೆ ಸೋಂಕಿತರನ್ನು ಹುಡುಕುವುದು, ಗುರುತಿಸುವುದು ಸುಲಭ. ಇದು ವೇಗವಾಗಿ ಆಗುವುದರಿಂದ ಸೋಂಕು ಮತ್ತಷ್ಟು ಜನರಿಗೆ ಹರಡುವುದು ತಪ್ಪುತ್ತದೆ. ಜತೆಗೆ ಕೋವಿಡ್ ಸೌಲಭ್ಯಗಳ ಸ್ಟೇಟಸ್ನನ್ನು ತೋರಿಸುವ ವ್ಯವಸ್ಥೆಯೂ ಆಗಬೇಕು.
ಎಲ್ಲಿ ಹಾಸಿಗೆಗಳಿವೆ, ಎಲ್ಲಿ ತುಂಬಿವೆ ಎಂಬ ಮಾಹಿತಿ ಜನರಿಗೆ ಕ್ಷಣಕ್ಷಣಕ್ಕೂ ಗೊತ್ತಾಗಬೇಕು. ಆ ನಿಟ್ಟಿನಲ್ಲಿ ಈ ಹೆಲ್ಪ್‌ಲೈನ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಡಿಸಿಎಂ ಸಲಹೆ ನೀಡಿದರು.
ಕೋವಿಡ್ ರಹಿತ ರೋಗಿಗಳಿಗೆ ತೊಂದರೆ :ಕೆಲ ಆಸ್ಪತ್ರೆಗಳು ಕೋವಿಡ್ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ತೀವ್ರ ತುರ್ತುನಿಗಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ಪಶ್ಚಿಮ ವಿಭಾಗದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಈಗಾಗಲೇ ನಾವು 100 ಹಾಸಿಗೆಗಳ ವ್ಯವಸ್ಥೆಯನ್ನು ಹೊಸದಾಗಿ ಮಾಡುತ್ತಿದ್ದೇವೆ. ಅದೇ ರೀತಿ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲೂ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಇದರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲೂ 50 ಹಾಸಿಗೆಗಳ ತೀವ್ರ ತುರ್ತು ನಿಗಾ ವ್ಯವಸ್ಥೆ ಮಾಡಿದ್ರೆ ಹೆಚ್ಚು ಅನುಕೂಲವಾಗುತ್ತದೆ. ಹಾಗೆಯೇ, ಆರೋಗ್ಯ ಕರ್ನಾಟಕ, ಆಯುಷ್ಮಾನ್ ಭಾರತ್ ಕಾರ್ಡ್ಗಳಿರುವ ರೋಗಿಗಳಿಗೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸಿಗುವಂತಾಗಬೇಕು ಎಂದು ಡಿಸಿಎಂ ಅವರು ಮುಖ್ಯಮಂತ್ರಿಗೆ ಸಲಹೆ ಮಾಡಿದರು.