ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ವೇಳೆ ಯಾವುದೇ ನ್ಯೂನತೆಗಳಾಗದಂತೆ ಸರಿಯಾದ ಮಾದರಿಯಲ್ಲಿ ಪರಿಷ್ಕರಣೆ ಕಾರ್ಯವಾಗಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಜೊತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಜೆದ ಸಭೆಯ ಕುರಿತು ಮಾತನಾಡಿದ ಅವರು, ಭಾರತ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕಣೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ಮತದಾರರ ಪಟ್ಟಿ ಪರಿಷ್ಕಣೆಯು ಇಂದಿನಿಂದ ಆಗಸ್ಟ್ 21ರವರೆಗೆ ನಡೆಯಲಿದೆ. ಒಂದು ತಿಂಗಳ ಕಾಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಬಿಎಲ್ಒ ತಂತ್ರಾಂಶದ ಮೂಲಕ ಮತದಾರರ ಸೇರ್ಪಡೆ, ತಿದ್ದುಪಡಿ ಹಾಗೂ ಹೆಸರು ತೆಗೆದುಹಾಕುವ ಕೆಲಸ ಮಾಡಲಿದ್ದಾರೆ. ಈ ವೇಳೆ ಬೂತ್ ಮಟ್ಟದ ಏಜೆಂಟ್ಗಳು ಸ್ಥಳದಲ್ಲಿರಬೇಕಿದ್ದು, ಎಲ್ಲೆಡೆ ಬೂತ್ ಮಟ್ಟದ ಏಜೆಂಟ್ಗಳನ್ನು ನಿಯೋಜನೆ ಮಾಡಬೇಕು ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ 28 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು ಕಡಿಮೆ ಇದ್ದರೆ, ಕೂಡಲೇ ನಿಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.