ಬೆಂಗಳೂರು ಲಾಕ್ಡೌನ್ಗೆ ನಾಳೆಯೇ ಮಾರ್ಗಸೂಚಿ ಬಿಡುಗಡೆ.. ಕಂದಾಯ ಸಚಿವ ಆರ್.ಅಶೋಕ್
ಈಗಾಗಲೇ ಪಾಸಿಟಿವ್ ಕೇಸ್ ಬಂದಿರುವ ಜಿಲ್ಲೆಗಳಲ್ಲಿ ಸೀಲ್ಡೌನ್ ಜಾರಿ ಮಾಡಲು ಸೂಚನೆ ಕೊಡಲಾಗಿದೆ. ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಿಗೆ ಹಾಗೂ ಕಡಿಮೆ ಪ್ರಕರಣ ಇರುವ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಆದೇಶ ನೀಡಲಾಗುತ್ತದೆ..
ಕಂದಾಯ ಸಚಿವ ಆರ್.ಅಶೋಕ್
ಬೆಂಗಳೂರು: ಮಂಗಳವಾರ ಸಂಜೆಯಿಂದಲೇ ಜುಲೈ 22ರವರೆಗೆ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆ ಕಡಿಮೆ ಹಾಗೂ ಹೆಚ್ಚು ಸೋಂಕು ಇರುವ ಜಿಲ್ಲೆಗಳಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಿಎಂ ಜೊತೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ನಿಯಮಗಳ ಬಗ್ಗೆ ಚರ್ಚೆ ನಡೆದಿದೆ. ಮಾರ್ಗಸೂಚಿ ಬಗ್ಗೆ ಸಿಎಂ ಯಡಿಯೂರಪ್ಪ ಅವರು ಸರ್ಕಾರದ ಮುಖ್ಯಕಾರ್ಯದರ್ಶಿ ಜೊತೆ ಮಾತನಾಡಿದ್ದಾರೆ. ಸೋಮವಾರ ಮಾರ್ಗಸೂಚಿ ಬಿಡುಗಡೆ ಆಗಲಿದೆ ಎಂದರು.
ಈಗಾಗಲೇ ಪಾಸಿಟಿವ್ ಕೇಸ್ ಬಂದಿರುವ ಜಿಲ್ಲೆಗಳಲ್ಲಿ ಸೀಲ್ಡೌನ್ ಜಾರಿ ಮಾಡಲು ಸೂಚನೆ ಕೊಡಲಾಗಿದೆ. ಹೆಚ್ಚು ಪ್ರಕರಣ ಇರುವ ಜಿಲ್ಲೆಗಳಿಗೆ ಹಾಗೂ ಕಡಿಮೆ ಪ್ರಕರಣ ಇರುವ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಆದೇಶ ನೀಡಲಾಗುತ್ತದೆ ಎಂದರು. ಬೆಂಗಳೂರು ಲಾಕ್‌ಡೌನ್ ಅವಧಿಯಲ್ಲಿ ವೈದ್ಯಕೀಯ ಸಂಬಂಧಿತ ಫ್ಯಾಕ್ಟರಿಗಳನ್ನು ತೆರೆಯಲು ಹಾಗೂ ಪಿಪಿಇ ಕಿಟ್ ತಯಾರಿಸುವ ಕಾರ್ಖಾನೆಗಳನ್ನು ತೆರೆಯಲು ಅವಕಾಶ ನೀಡುವಂತೆ ನಾವು ಮನವಿ ಮಾಡಿದ್ದೆವು, ಇದಕ್ಕೆ ಸಿಎಂ ಒಪ್ಪಿದ್ದಾರೆ ಎಂದು ತಿಳಿಸಿದರು.
ಕೊರೊನಾ ನಿಯಂತ್ರಣ ಮಾಡಲು ಚೈನ್ ಬ್ರೇಕ್ ಮಾಡಬೇಕಾಗಿದೆ. ಹಾಗಾಗಿ ಲಾಕ್‌ಡೌನ್ ಜಾರಿ ಮಾಡಲಾಗುತ್ತಿದೆ. ಸದ್ಯ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯ ಸಮಸ್ಯೆ ಇದೆ. ಆದರೆ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಬೆಡ್ ಸಮಸ್ಯೆ ಇಲ್ಲ. ಖಾಸಗಿ ಆಸ್ಪತ್ರೆಗಳ ಬೆಡ್ ಸ್ಟ್ರೀಮ್‌ಲೈನ್ ಮಾಡಿದ್ರೆ ಬೆಂಗಳೂರಿನಲ್ಲಿ ಬೆಡ್ ಸಮಸ್ಯೆ ನೀಗುತ್ತದೆ. ಮಾನವೀಯತೆಯಿಂದ ಸಹಾಯ ಮಾಡಿ ಅಂತಾ ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡಿದ್ದೇವೆ ಎಂದರು.
ಏಳು ದಿನ ಮಾತ್ರ ಲಾಕ್‌ಡೌನ್ :ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಕ್‌ಡೌನ್ ಏಳು ದಿನ ಮಾತ್ರ ಇರಲಿದೆ. ಸೋಂಕು ಹರಡುವ ಪ್ರಮಾಣ ಯಾವ ರೀತಿ ಕಡಿಮೆ ಆಗುತ್ತದೆ ಎನ್ನುವುದನ್ನು ನೋಡುತ್ತೇವೆ. ನಂತರ ಲಾಕ್‌ಡೌನ್ ವಿಸ್ತರಣೆ ಮಾಡಬೇಕೋ, ಬೇಡವೋ ಎಂಬುದನ್ನು ತಜ್ಞರ ವರದಿ ಪಡೆದು ಎರಡು ದಿನ ಮೊದಲೇ ತಿಳಿಸುತ್ತೇವೆ. ಅಗತ್ಯ ಸೇವೆ ಹೊರತು ಪಡಿಸಿ ಉಳಿದವರು ಮನೆಯಲ್ಲೇ ಇರಿ ಎಂದು ಸರ್ಕಾರದ ಪರವಾಗಿ ಜನರಲ್ಲಿ ಕೈಮುಗಿದು ವಿನಂತಿ ಮಾಡಿದರು.
ಹೋಗುವವರು ನಾಳೆಯೇ ಹೋಗಿ :ನಿನ್ನೆಯೇ ಬೆಂಗಳೂರಿನಲ್ಲಿ ಲಾಕ್‌ಡೌನ್ ಘೋಷಣೆ ಮಾಡಿರುವ ಕಾರಣ, ನಗರದಿಂದ ಹೊರಗೆ ಹೋಗುವವರಿದ್ದರೆ ಅವರು ನಾಳೆಯೇ ಹೋಗಬಹುದು. ಯಾರು ಯಾರು ಹೋಗಬೇಕು ಅಂತಾ ಇದ್ದೀರೋ, ಅವರೆಲ್ಲಾ ನಾಳೆಯೇ ಹೊರಟು ಬಿಡಿ ಎಂದು ಮನವಿ ಮಾಡಿದರು.