ಬೆಂಗಳೂರು: ರಾಜ್ಯದಲ್ಲಿ ಬರ ಆವರಿಸಿದ್ದರೂ, ಕೇಂದ್ರ ಯಾವುದೇ ರೀತಿಯ ಪರಿಹಾರವನ್ನು ನೀಡಿಲ್ಲ. ಈ ಬಗ್ಗೆ ಪ್ರಶ್ನಿಸದ ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, "ರಾಜ್ಯದ ಜನರ ಪರವಾಗಿ ಬಿಜೆಪಿ ಶಾಸಕರು, ಸಂಸದರು ಕೇಂದ್ರದ ಮುಂದೆ ಮಾತನಾಡುತ್ತಿಲ್ಲ. ಹಾಗಂತ ನಾವು ರಾಜ್ಯದ ಜನರ ಪರವಾಗಿ ಮಾತನಾಡಿದರೆ ಅದು ಅಪರಾಧವೇ? ಕೇಂದ್ರ ಸರ್ಕಾರಕ್ಕೆ ಸಿಎಂ ಮೂರು ಪತ್ರ ಬರೆದಿದ್ದಾರೆ. ಆದರೆ ಸಿಎಂಗೆ ಪ್ರಧಾನಿ ಸಮಯಾವಕಾಶ ಕೊಟ್ಟಿಲ್ಲ. ಈ ವಿಚಾರವಾಗಿ ರಾಜ್ಯದ ಹಕ್ಕನ್ನು ಪ್ರತಿಪಾದನೆ ಮಾಡುವುದು ಅಪರಾಧವೇ?" ಎಂದು ಪ್ರಶ್ನಿಸಿದ್ದಾರೆ.
"ನಾವು ಸಂವಿಧಾನದಲ್ಲಿ ನಂಬಿಕೆ ಇಟ್ಟವರು. ನಾವು ಯಾರಿಗೂ ಬೈದಿಲ್ಲ. ಸಿಎಂ ಮೂರು ಬಾರಿ ದೆಹಲಿಗೆ ಹೋಗಿದ್ದಾರೆ. ಮೂರು ಬಾರಿ ಪತ್ರವನ್ನು ಬರೆದಿದ್ದಾರೆ. ಆದರೂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಪತ್ರಕ್ಕೆ ಉತ್ತರ ಇಲ್ಲ" ಎಂದು ಕೇಂದ್ರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ಯರಾಜ್ಯಗಳಿಗೆ ಮೇವು ಸಾಗಾಟಕ್ಕೆ ನಿರ್ಬಂಧ:"ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 223 ತಾಲೂಕುಗಳಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಆದೇಶ ಮಾಡಲಾಗಿದೆ. ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು. ಕುಡಿಯುವ ನೀರಿನ ತುರ್ತುಪರಿಸ್ಥಿತಿ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ಉಚಿತವಾಗಿ ನೀಡಲಾಗುತ್ತಿದೆ. ಗಡಿ ಜಿಲ್ಲೆಗಳಿಂದ ಮೇವು ಹೊರ ರಾಜ್ಯಗಳಿಗೆ ಹೋಗುವ ಆತಂಕ ಇದೆ. ಹೀಗಾಗಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಮೇವು ಸಾಗಣೆಗೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ" ಎಂದು ತಿಳಿಸಿದರು.
"ಟ್ಯಾಂಕರ್ ಹಾಗೂ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಅಕ್ಟೋಬರ್ ತಿಂಗಳಲ್ಲಿ 130 ಗ್ರಾಮಗಳಲ್ಲಿ ಖಾಸಗಿ ಬೋರ್ವೆಲ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಸದ್ಯ 95ಕ್ಕೆ ಇಳಿದಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ ಗ್ರಾಮ 16ಕ್ಕೆ ಇಳಿದಿದೆ" ಎಂದು ವಿವರಿಸಿದರು.
"ಬೆಂಗಳೂರಿನ ಯಾವುದೇ ವಾರ್ಡ್ನಲ್ಲಿ ಟ್ಯಾಂಕರ್ ಮೂಲಕ ಈಗ ನೀರು ಸರಬರಾಜು ಮಾಡುತ್ತಿಲ್ಲ. ಜಿಲ್ಲಾಡಳಿತ ಬಳಿ 460 ಕೋಟಿ ರೂ. ಹಣ ಇತ್ತು. ಇವಾಗ 783 ಕೋಟಿ ರೂ. ಲಭ್ಯವಿದೆ. 13 ಕೋಟಿ ರೂ. ಮಾನವ ದಿನ ಮಂಜೂರಾಗಿದೆ. ಈವರೆಗೆ 10.3 ಕೋಟಿ ರೂ. ಮಾನವ ದಿನ ಬಳಕೆಯಾಗಿದೆ. ಅದನ್ನು 18 ಕೋಟಿ ರೂ. ಮಾನವ ದಿನಗಳಿಗೆ ಹೆಚ್ಚಿಸಲು ಮನವಿ ಮಾಡುತ್ತಿದ್ದೇವೆ. ಈಗಾಗಲೇ 2.80 ಲಕ್ಷ ಕಾರ್ಡ್ದಾರರು 80 ದಿನಗಳಿಗಿಂತ ಹೆಚ್ಚು ಉದ್ಯೋಗ ಪಡೆದಿದ್ದಾರೆ. ಕಾನೂನಿನಲ್ಲೇ ಬರಗಾಲದ ವೇಳೆ 150 ಮಾನವ ದಿನಕ್ಕೆ ಹೆಚ್ಚಿಸುವ ನಿಯಮ ಇದೆ. ಅದನ್ನು ಕೇಂದ್ರ ಸರ್ಕಾರ ಮಾಡಲೇಬೇಕು. ಅದು ಆಗಿಲ್ಲ ಎಂದರೆ ಏನು ಮಾಡಬೇಕು ಎಂಬುದನ್ನು ನಂತರ ಚಿಂತಿಸೋಣ. ವ್ಯಕ್ತಿಗತವಾಗಿ 100 ದಿನದಿಂದ 150 ಮಾನವ ದಿನ ಹೆಚ್ಚಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮತ್ತೊಮ್ಮೆ ಮನವಿ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಕೃಷಿ ಇಲಾಖೆಯಿಂದ 230 ಕೋಟಿ ರೂ. ಬೆಳೆ ವಿಮೆ ಪಾವತಿಯಾಗುತ್ತಿದೆ. ಬಾಕಿ ಇರುವ ಹಣವನ್ನು ತಕ್ಷಣ ಪಾವತಿಸಲು ಸೂಚಿಸಲಾಗಿದೆ. 2,000 ಕೋಟಿ ರೂ. ನಷ್ಟು ರೈತರಿಗೆ ಬೆಳೆ ವಿಮೆ ರೂಪದಲ್ಲಿ ಸಿಗುವ ಸಾಧ್ಯತೆ ಇದೆ. 200 ಕೋಟಿ ರೂ. ವೆಚ್ಚದಲ್ಲಿ ಕೃಷಿ ಹೊಂಡ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. 800 ಕೋಟಿ ರೂ. ಹನಿ ನೀರಾವರಿಗೆ ರೈತರಿಗೆ ಹಣ ನೀಡಲು ಸೂಚನೆ ನೀಡಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:'ಮೋದಿ ಸುಳ್ಳಿನ ಜಗದ್ಗುರು': ರಾಹುಲ್ ಗಾಂಧಿ ಟೀಕಿಸಿದ ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು