ಬೆಂಗಳೂರು :ಎಂಜಿನಿಯರಿಂಗ್ ಪರೀಕ್ಷೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು ಕಾಲೇಜಿಗೆ ಬೀಗ ಹಾಕಿರುವ ಘಟನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜಿನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಈ ಕೃತ್ಯದ ಹಿಂದೆ ಆರ್‌ಎಸ್‌ಎಸ್ ಮುಖಂಡರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ನಗರದ ದಕ್ಷಿಣ ತಾಲೂಕಿನ ಹುಳಿಮಾವು ಗ್ರಾಮದಲ್ಲಿರುವ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ರಾಜ್ಯದ ಮೊಟ್ಟ ಮೊದಲ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯಾಗಿದೆ. ವಿಶ್ಷೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಿಂದ ಅನುಮೋದನೆ ಪಡೆದಿರುವ ಈ ಕಾಲೇಜಿಗೆ ಎಐಸಿಟಿಇ ಮಾನ್ಯತೆಯೂ ಸಿಕ್ಕಿದೆ. ಆದರೆ, ಕಾಲೇಜು ಕಾರ್ಯ ನಿರ್ವಹಿಸುತ್ತಿರುವ ಭೂಮಿಯ ಒಡೆತನ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಪರೀಕ್ಷೆ ಸಂದರ್ಭದಲ್ಲಿಯೇ ಕಾಲೇಜಿಗೆ ಬೀಗ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಅಧಿಕಾರಿಗಳಿಗೆ ಹೈಕೋರ್ಟ್ ಛೀಮಾರಿ :ಕಾಲೇಜಿನ ವಿದ್ಯಾರ್ಥಿಗಳು ವಿಟಿಯು ಆಗಸ್ಟ್ 31ರಿಂದ ಸೆಪ್ಟೆಂಬರ್ 30ರವರೆಗೆ ನಿಗದಿಪಡಿಸಿದ್ದ ಪರೀಕ್ಷೆಗಳನ್ನು ಬರೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗಿ ಕಾಲೇಜಿಗೆ ಬೀಗ ಹಾಕಿದ್ದಾರೆ. ಇದರಿಂದಾಗಿ ಕಾಲೇಜು ಕೊಠಡಿಯ ಸಿಸಿಟಿವಿ ಅಡಿಯಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳು ಕಾಲೇಜು ಸಮೀಪದ ಶೆಡ್‌ನಲ್ಲಿ ಪರೀಕ್ಷೆಗಳನ್ನು ಬರೆದಿದ್ದಾರೆ.
ಈ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಹಾಕಿರುವ ಬೀಗ ತೆಗೆಯುವಂತೆ ಸೂಚಿಸಿರುವುದಲ್ಲದೇ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಅಮಾನವೀಯವಾಗಿ ನಡೆದುಕೊಂಡಿರುವ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಜತೆಗೆ ಬೀಗ ಹಾಕಿದ್ದಕ್ಕೆ ವೈಯಕ್ತಿಕವಾಗಿ ಪ್ರಮಾಣ ಪತ್ರ ಸಲ್ಲಿಸುವಂತೆಯೂ ಸೂಚಿಸಿದೆ.
ಪ್ರಕರಣದ ಹಿನ್ನೆಲೆ :ರಾಜ್ಯದಲ್ಲಿ ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಇಸ್ಲಾಮಿಕ್ ಮಿಷನ್ ಆಫ್ ಇಂಡಿಯಾ ಸಂಸ್ಥೆ ಈ ಕಾಲೇಜು ನಡೆಸುತ್ತಿದೆ. ವಿಟಿಯು ಅನುಮೋದನೆ ಹಾಗೂ ಎಐಸಿಟಿಇ ಮಾನ್ಯತೆ ದೊರೆತಿರುವ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಅಲ್ಲದೇ, ಸರ್ಕಾರಿ ಕೋಟಾದಡಿ ಸೀಟು ಪಡೆದಿರುವ ವಿದ್ಯಾರ್ಥಿಗಳೂ ಕಲಿಯುತ್ತಿದ್ದಾರೆ. 1980ರಲ್ಲಿ ಕಾಲೇಜಿಗೆ ಸರ್ಕಾರವೇ ₹5.85 ಲಕ್ಷ ಕಟ್ಟಿಸಿಕೊಂಡು ಹುಳಿಮಾವು ಗ್ರಾಮದ ಸರ್ವೇ ನಂ.63 ರಲ್ಲಿ ಒಟ್ಟು 8 ಎಕರೆ ಭೂಮಿ ಮಂಜೂರಿಗೆ ಆದೇಶ ಹೊರಡಿಸಿತ್ತಂತೆ. ಆದರೆ, ಇದೇ ವೇಳೆ ಕಾಲೇಜಿನ ಆಡಳಿತ ಮಂಡಳಿ ನಡುವೆ ವಿವಾದಗಳಾಗಿದ್ದವು.
ಈ ಸಂದರ್ಭದಲ್ಲಿ ಸರ್ಕಾರವೇ ಆಡಳಿತಾಧಿಕಾರಿ ನೇಮಕ ಮಾಡಿತ್ತು. ಅಲ್ಪಸಂಖ್ಯಾತರ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡುವುದು ಸೂಕ್ತವಲ್ಲ ಎಂದು ಹಿಂದಿನ ಆಡಳಿತ ಮಂಡಳಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ಕೋರ್ಟ್ ಸೂಚನೆಗೆ ಮೇರೆಗೆ ಹೊಸದಾಗಿ ನೇಮಕಗೊಂಡ ಆಡಳಿತ ಮಂಡಳಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ.
ಈ ನಡುವೆ 2009ರಲ್ಲಿ ದಕ್ಷಿಣ ವಿಭಾಗದ ತಹಶೀಲ್ದಾರ್ ಕಾಲೇಜಿಗೆ ನೋಟಿಸ್ ಜಾರಿ ಮಾಡಿ, ಭೂ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ್ದರು. ನಂತರ ದಾಖಲೆಗಳ ಪ್ರಕಾರ ಜಮೀನು ನಿಮ್ಮದಲ್ಲ. ಬದಲಿಗೆ ಸರ್ಕಾರಕ್ಕೆ ಸೇರಬೇಕು ಎಂದು ತಿಳಿಸುತ್ತಾರೆ. ಈ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು.