ಬೆಂಗಳೂರು :ಕಂದಾಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಹೇಳುವ ಮೂಲಕ ನಿರೀಕ್ಷೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿಗೆ ನಿರಾಶೆ ಉಂಟಾಗಿದೆ.
ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವ್ಯಾಪ್ತಿಯಲ್ಲಿ ಒಟ್ಟು 1,422 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗಾಗಿ ರಾಜ್ಯ ಸರ್ಕಾರ ವಾರ್ಷಿಕವಾಗಿ 31.35 ಕೋಟಿ ರೂ. ವೆಚ್ಚ ಮಾಡುತ್ತಿದೆ.
ಆದರೆ, ಈ ಸಿಬ್ಬಂದಿಯನ್ನ ಯಾವುದೇ ಕಾರಣಕ್ಕೂ ಖಾಯಂಗೊಳಿಸುವ ಇಲ್ಲ ಅಧಿಕೃತವಾಗಿ ಮುಂದುವರಿಸುತ್ತೇವೆ ಎಂದು ಭರವಸೆ ನೀಡುವ ವ್ಯವಸ್ಥೆ ಇಲ್ಲ ಎಂದು ಕಂದಾಯ ಸಚಿವರೇ ತಿಳಿಸಿದ್ದಾರೆ. ತಮ್ಮ ಉದ್ಯೋಗ ಭದ್ರತೆ ಹಾಗೂ ಖಾಯಂಗೊಳಿಸುವ ನಿರೀಕ್ಷೆ ಹೊಂದಿದ್ದ ಸಿಬ್ಬಂದಿಗೆ ಇದೀಗ ನಿರಾಶೆ ಉಂಟಾಗಿದೆ.
ಸಿಬ್ಬಂದಿ ಹಾಗೂ ಪಾವತಿ ಅಂಕಿ-ಅಂಶ :ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ 461 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗಾಗಿ ವಾರ್ಷಿಕ 8,71,98,791 ರೂ. ಮೊತ್ತ ಪಾವತಿಸಲಾಗುತ್ತಿದೆ. ಮೈಸೂರಿನಲ್ಲಿ 381 ಮಂದಿ ಕಾರ್ಯನಿರ್ವಹಿಸುತ್ತಿದ್ದು 8,86,35,504 ರೂ. ಮೊತ್ತ ಪಾವತಿಸಲಾಗುತ್ತಿದೆ.
ಬೆಳಗಾವಿಯಲ್ಲಿ 260 ಮಂದಿ ಕಾರ್ಯನಿರ್ವಹಿಸುತ್ತಿದ್ದು, 5,91,52,764 ರೂ. ಮೊತ್ತ ಪಾವತಿಸಲಾಗುತ್ತಿದೆ. ಕಲಬುರಗಿಯಲ್ಲಿ 320 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 7,84,83,065 ರೂ. ಪಾವತಿಸಲಾಗುತ್ತಿದೆ. ಒಟ್ಟು 1422 ಮಂದಿಗೆ 31,34,70,124 ರೂ. ಮೊತ್ತವನ್ನು ಸರ್ಕಾರದ ಕಂದಾಯ ಇಲಾಖೆ ಪಾವತಿಸುತ್ತಿದೆ.
ನೇರ ನೇಮಕಾತಿ ಇಲ್ಲ :ಯಾವುದೇ ಸಿಬ್ಬಂದಿ ಸರ್ಕಾರದಿಂದ ನೇರ ನೇಮಕ ಆಗುವುದಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ನಿರ್ದಿಷ್ಟ ಅವಧಿಗೆ ಮಾನವ ಸಂಪನ್ಮೂಲ ಸಂಸ್ಥೆಗಳಿಂದ ಸಿಬ್ಬಂದಿ ಸೇವೆ ಪಡೆಯಲಾಗುತ್ತಿದೆ. ಅಲ್ಲದೆ ಇವರಿಗೆ ಪಾವತಿಸುವ ಮೊತ್ತವನ್ನು ಕೂಡ ಸಂಪನ್ಮೂಲ ಸಂಸ್ಥೆಗೆ ನೇರವಾಗಿ ಸರ್ಕಾರ ಬಿಡುಗಡೆ ಮಾಡುತ್ತದೆ.
ಸಿಬ್ಬಂದಿ ಹಾಗೂ ಸರ್ಕಾರದ ನಡುವೆ ಯಾವುದೇ ಸಂಬಂಧ ಇರಲ್ಲ. ಈ ಹಿನ್ನೆಲೆ ಅವಧಿ ಮುಗಿದ ನಂತರ ಅವರನ್ನು ಮುಂದುವರೆಸುವ ಪ್ರಸ್ತಾಪ ಉದ್ಭವಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ.
ಡಿಜಿಟಲೀಕರಣ :ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ನೌಕರರ ಅಗತ್ಯ ಕೂಡ ಅಷ್ಟಾಗಿ ಎದುರಾಗುವುದಿಲ್ಲ. 2001ರಿಂದಲೇ ಕಂದಾಯ ಇಲಾಖೆಯಲ್ಲಿ ಪಹಣಿ ಮತ್ತು ಎಂಆರ್ ಪ್ರತಿಗಳ ಡಿಜಿಟಲೀಕರಣ ಕಾರ್ಯ ಆರಂಭವಾಗಿದೆ.
ಯಾವುದೇ ಪ್ರತ್ಯೇಕ ಅನುದಾನ ನೀಡದೆ ಈ ಪ್ರಕ್ರಿಯೆ ಪ್ರಗತಿಯಲ್ಲಿದೆ. ಅತ್ಯಂತ ಸರಳವಾಗಿ ದಾಖಲೆಗಳು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಕಾರ್ಯ ನಡೆದಿದೆ. ಒಮ್ಮೆ ಡಿಜಿಟಲೀಕರಣ ಸಂಪೂರ್ಣಗೊಂಡರೆ ಮುಂದಿನ ದಿನಗಳಲ್ಲಿ ಸಿಬ್ಬಂದಿ ಬಳಕೆ ಕೂಡ ಗಣನೀಯವಾಗಿ ಕಡಿಮೆಯಾಗಲಿದೆ. ಹೊರಗುತ್ತಿಗೆ ನೌಕರರ ಅಗತ್ಯವೇ ಇರದೇ ಹೋಗಲೂಬಹುದು.
ಈ ಹಿನ್ನೆಲೆ ಈಗಿರುವ ಹೊರಗುತ್ತಿಗೆ ನೌಕರರ ಖಾಯಂಗೊಳಿಸಿಕೊಳ್ಳುವ ಯೋಜನೆ ಸರ್ಕಾರದ ಮುಂದೆ ಇಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಇದೇ ವಿಚಾರವನ್ನು ಕಳೆದ ಅಧಿವೇಶನದಲ್ಲಿ ವಿಧಾನಪರಿಷತ್‌ನಲ್ಲೂ ಅವರು ಸ್ಪಷ್ಟಪಡಿಸಿದ್ದಾರೆ.
ರಾಜ್ಯಾದ್ಯಂತ ಅಭಿಲೇಖಾಲಯಕ್ಕೆ ಸಂಬಂಧಿಸಿದ ಅಂದಾಜು 1,91,15,313 ಕಡತಗಳು ಮತ್ತು 7,80,638 ವಹಿಗಳು ಇದ್ದು ಈ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸಲಾಗಿದೆ. ಹಂತಹಂತವಾಗಿ ಇಡೀ ಇಲಾಖೆಯನ್ನು ಡಿಜಿಟಲೀಕರಣಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೂಡ ಅವರು ತಿಳಿಸಿದ್ದಾರೆ.