ಬೆಂಗಳೂರು : ನಿಯೋಜನೆ ಮೇಲೆ ಅನ್ಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಹಲವು ನೌಕರರು ಮೂಲ ಮಾತೃ ಘಟಕದಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕು ಮತ್ತು ಸಕ್ಷಮ ಪ್ರಾಧಿಕಾರಗಳು ನೌಕರರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ಕಂದಾಯ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಕೌಟುಂಬಿಕ ಮತ್ತು ಇತರ ಕಾರಣಗಳಿಂದಾಗಿ ನೇಮಕಾತಿ ಹೊಂದಿದ ಜಿಲ್ಲೆಯಿಂದ ಇತರ ಜಿಲ್ಲೆಗಳಲ್ಲಿ ನಿಯೋಜನೆ ಅಥವಾ ಅನ್ಯ ಕರ್ತವ್ಯದ ಮೇರೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನೌಕರರು ನಿಯೋಜನೆ/ಅನ್ಯ ಕರ್ತವ್ಯದ ಅವಧಿ ಮುಕ್ತಾಯಗೊಂಡರೂ ಸಹ ಸರ್ಕಾರದ ಆದೇಶವಿಲ್ಲದೇ ನಿಯೋಜನೆಗೊಂಡ ಜಿಲ್ಲೆಗಳಲ್ಲಿಯೇ ಮುಂದುವರಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕಂದಾಯ ಇಲಾಖೆಯಲ್ಲಿ ನೇಮಕಗೊಂಡ ಹೆಚ್ಚಿನ ಸಂಖ್ಯೆ ನೌಕರರು ಮೂಲ ಜಿಲ್ಲೆಗಳಿಂದ ಅನ್ಯ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮೂಲ ಜಿಲ್ಲೆಯ ಸಾರ್ವಜನಿಕ ಕೆಲಸಕ್ಕೆ ಹಿನ್ನೆಡೆಯಾಗುತ್ತಿದೆ. ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೆಲವು ಪ್ರಕರಣಗಳಲ್ಲಿ ನಿಯೋಜನೆಯ ಅವಧಿ ಮುಕ್ತಾಯಗೊಂಡರೂ ಸರ್ಕಾರದ/ಸಕ್ಷಮ ಪ್ರಾಧಿಕಾರದ ಮುಂದುವರಿಕೆ ಆದೇಶ ಇಲ್ಲದೆ ಅಲ್ಲಿಯೇ ಕೆಲಸ ಮಾಡುತ್ತಿರುವುದು ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರಿಗಳು ತಕ್ಷಣವೇ ಅವರನ್ನು ಜಿಲ್ಲೆಯಿಂದ ಬಿಡುಗಡೆಗೊಳಿಸಬೇಕು ಮತ್ತು ನೌಕರರು ಮೂಲ ಮಾತೃ ಘಟಕದಲ್ಲಿ ಕಾರ್ಯ ವರದಿ ಮಾಡಿಕೊಳ್ಳಬೇಕು. ಒಂದು ವೇಳೆ ಕಾರ್ಯ ವರದಿ ಮಾಡಿಕೊಳ್ಳದಿದ್ದರೆ ನೌಕರರ ವೇತನ ಮತ್ತು ಇತರ ಭತ್ಯೆಗಳನ್ನು ಕೂಡಲೇ ತಡೆ ಹಿಡಿದು, ಅಂತಹ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಐಎಎಸ್ ಅಧಿಕಾರಿ ವರ್ಗಾವಣೆ:ಐಪಿಎಸ್ ಅಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರನ್ನು ಚಿತ್ರದುರ್ಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಪ್ರಸ್ತುತ ಅವರು ವಿಧಿವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.