ಬೆಂಗಳೂರು :ಸಾಮಾಜಿಕ ಭದ್ರತೆ ಯೋಜನೆಯಡಿ ಲಕ್ಷಾಂತರ ಫಲಾನುಭವಿಗಳಿಗೆ ವಿವಿಧ ಪಿಂಚಣಿಗಳನ್ನು ನೀಡಲಾಗುತ್ತಿದೆ. ಆದರೆ, ಅದೆಷ್ಟೋ ಮಂದಿ ಅನರ್ಹ ಫಲಾನುಭವಿಗಳೂ ಪಿಂಚಣಿ ಪಡೆಯುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಅದಕ್ಕಾಗಿಯೇ ಕಂದಾಯ ಇಲಾಖೆ ವಾರ್ಷಿಕ ಭೌತಿಕ ಪರಿಶೀಲನೆ ನಡೆಸುತ್ತಿದೆ. ಆ ಮೂಲಕ 2021-22ನೇ ಸಾಲಿನಲ್ಲಿ ಲಕ್ಷಾಂತರ ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಿದೆ.
ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಪಿಂಚಣಿಗಳನ್ನು ನೀಡಲಾಗುತ್ತಿದೆ. ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಸೇರದಂತೆ ವಿವಿಧ ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿಯನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 70.69 ಲಕ್ಷ ಮಂದಿ ಪಿಂಚಣಿದಾರರು ಇದ್ದಾರೆ. ಪಿಂಚಣಿಗಾಗಿ ರಾಜ್ಯ ಸರ್ಕಾರ ವಾರ್ಷಿಕ 7,408.2 ಕೋಟಿ ರೂ. ಅನುದಾನ ಎತ್ತಿಡುತ್ತದೆ. ವರ್ಷಂಪ್ರತಿ ಸಾಮಾಜಿಕ ಭದ್ರತೆಗೆ ನೀಡುವ ಅನುದಾನ ಹೆಚ್ಚುತ್ತಲೇ ಇದೆ.
2022-23ರಲ್ಲಿ 9,478.35 ಕೋಟಿ ರೂ. ಅನುದಾನವನ್ನು ಪಿಂಚಣಿಗಾಗಿ ಒದಗಿಸಲಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದ ಅನುದಾನವನ್ನು ಪಿಂಚಣಿ ನೀಡಲಾಗುತ್ತಿದೆ. ಆದರೆ, ಈ ಪಿಂಚಣಿ ಲಕ್ಷಾಂತರ ಅನರ್ಹ ಫಲಾನುಭವಿಗಳ ಕೈ ಸೇರುತ್ತಿದೆ. ಇದರಿಂದ ಬೊಕ್ಕಸಕ್ಕೆ ಭಾರಿ ನಷ್ಟ ಆಗುತ್ತಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಂದಾಯ ಇಲಾಖೆ ಫಲಾನುಭವಿಗಳ ವಾರ್ಷಿಕ ಭೌತಿಕ ಪರಿಶೀಲನೆ ನಡೆಸಿ ಅನರ್ಹರನ್ನು ಪತ್ತೆ ಮಾಡಿ, ಅವರಿಗೆ ಪಾವತಿಯಾಗುತ್ತಿದ್ದ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿದೆ.
3.15 ಲಕ್ಷ ಅನರ್ಹ ಫಲಾನುಭವಿಗಳಿಗೆ ಪಿಂಚಣಿ ಸ್ಥಗಿತ :2021-22 ಸಾಲಿನಲ್ಲಿ ಕಂದಾಯ ಇಲಾಖೆ ಭೌತಿಕ ಪರಿಶೀಲನೆ ನಡೆಸಿ ಬರೋಬ್ಬರಿ 3.15 ಲಕ್ಷ ಮಂದಿ ವಲಸೆ, ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿದೆ. ಈ ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ.
ಆ ಮೂಲಕ ಸರ್ಕಾರದ ಬೊಕ್ಕಸದಲ್ಲಿ ಸುಮಾರು 500 ಕೋಟಿ ರೂ.ಗೂ ಅಧಿಕ ಮೊತ್ತ ಉಳಿತಾಯವಾಗಿದೆ. ನವೋದಯ ಮೊಬೈಲ್ ಆ್ಯಪ್ ಆಧರಿಸಿ ಫಲಾನುಭವಿಗಳ ಸಮಗ್ರ ವಾರ್ಷಿಕ ಪರಿಶೀಲನೆ ನಡೆಸಲಾಗಿದೆ. ವಿವಿಧ ಇಲಾಖೆಗಳ ದತ್ತಾಂಶಗಳಲ್ಲಿನ ಮಾಹಿತಿ ಆಧರಿಸಿ (ಇ–ಜನ್ಮ, ಪಡಿತರಚೀಟಿ) ಮೃತ, ವಲಸೆ, ಅನರ್ಹರನ್ನು ಗುರುತಿಸಲಾಗುತ್ತಿದೆ.