ಬೆಂಗಳೂರು: ವಿಧಾನಸೌಧದಲ್ಲಿ ಇಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಎಂ ಡಾ. ಜಿ.ಪರಮೇಶ್ವರ್ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ನಡುವೆ ಇಲಾಖೆಗೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಸಿಎಂ-ರೇವಣ್ಣ ನಡುವೆ ವಾಗ್ವಾದ! - kannadanews
ವಿಧಾನಸೌಧದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ವೇಳೆ ಡಿಸಿಎಂ ಹಾಗೂ ಸಚಿವ ರೇವಣ್ಣ ನಡುವೆ ಮಾತಿನ ವಾಗ್ವಾದ ನಡೆಯಿತು.
ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿಎಂ ಪರಮೇಶ್ವರ್ ತರಾಟೆಗೆ ತೆಗೆದುಕೊಳ್ಳುವಾಗ, ರೇವಣ್ಣ ಮಧ್ಯೆಪ್ರವೇಶಿಸಿ ತಮ್ಮ ಇಲಾಖೆ ಬಗ್ಗೆ ಸಮಜಾಯಿಷಿ ಕೊಡಲು ಮುಂದಾದರು. ಆಗ ಇಬ್ಬರ ನಡುವೆ ಮಾತಿನ ವಾಗ್ವಾದ ನಡೆದಿದೆ. ಯಾವುದೇ ಕಾಮಗಾರಿಗಳು ನಿಗದಿತ ಸಮಯದಲ್ಲೇ ಪೂರ್ಣವಾಗಬೇಕು. ಆದರೆ ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಯುತ್ತಿಲ್ಲ. ನೀವು ಗುತ್ತಿಗೆದಾರನಿಗೆ ಮತ್ತಷ್ಟು ಕಾಲಾವಕಾಶ ಕೊಟ್ಟರೆ ಕಾಮಗಾರಿ ವೆಚ್ಚ ಕೂಡ ಹೆಚ್ಚಾಗುತ್ತದೆ. ಹೀಗೆ ಕಾಮಗಾರಿ ವೆಚ್ಚ ಯಾಕೆ ಹೆಚ್ಚಳ ಆಗುತ್ತದೆ ಎಂದು ಪರಮೇಶ್ವರ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಕಾಮಗಾರಿ ವೆಚ್ಚ ಕೋಟಿಗಟ್ಟಲೇ ಹೆಚ್ಚಾಗುತ್ತೆ. ಇದಕ್ಕೆ ಯಾರು ಹೊಣೆ? ನೀವು ನಿಗದಿ ಮಾಡಿದ ನಿಗದಿತ ಸಮಯದಲ್ಲೇ ಯಾಕೆ ಕೆಲಸ ಪೂರ್ಣ ಮಾಡಲ್ಲ? ನಿಗದಿತ ಅವಧಿಯಲ್ಲಿ ಯೋಜನೆ ಪೂರ್ಣ ಮಾಡಿ. ಇಲ್ಲವೇ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಸಿಎಂ ಕುಮಾರಸ್ವಾಮಿ ಅವರು ಹೇಳಿದ ಮೇಲೆಯೇ ಅದನ್ನು ಮಾಡುತ್ತೀರಲ್ಲ ಎಂದು ಡಿಸಿಎಂ ಸಿಟ್ಟಾದರು.
ನಿಮ್ಮ ಇಲಾಖೆಯಲ್ಲಿ ಔಟ್ ಸೋರ್ಸ್ ಜಾಸ್ತಿ ಕೊಡ್ತಿದ್ದೀರಾ. ಯಾಕೆ ಜಾಸ್ತಿ ಔಟ್ ಸೋರ್ಸ್ ಕೊಡುತ್ತೀರಾ?. ಇದರಿಂದ ಯಾರಿಗೆ ಲಾಭ? ನಿಮಗೆ ಪರಿಜ್ಞಾನ ಇಲ್ವಾ ಎಂದು ಅಧಿಕಾರಿಗಳಿಗೆ ನೇರವಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಪರಮೇಶ್ವರ್ ಮಾತಿಗೆ ಮಧ್ಯಪ್ರವೇಶಿಸಿದ ರೇವಣ್ಣ, ನಮ್ಮ ಬಳಿ ಸಿಬ್ಬಂದಿ ಕೊರತೆ ಇದೆ. ವಲಯವಾರು ಎಂಜಿನಿಯರ್ ಹಾಗೂ ಒಬ್ಬ ಡ್ರೈವರ್ ಇದ್ದಾರೆ. ನಾವು ಯಾರಿಗೂ ಔಟ್ ಸೋರ್ಸಿಂಗ್ ಕೊಟ್ಟಿಲ್ಲ. ಪ್ರತಿ ಗುತ್ತಿದಾರರು ಕಾಮಗಾರಿ ಪ್ರಗತಿ ಕುರಿತು ಪ್ರತಿ ವಾರ ಪ್ರಗತಿ ವರದಿ ನೀಡಲೇಬೇಕು. ಹಗಲಿರುಳು ಅಧಿಕಾರಿಗಳೊಂದಿಗೆ ಸಭೆ ಮಾಡುತ್ತಿದ್ದೇನೆ. ಮುಂದಿನ ಸಭೆಯಲ್ಲಿ ಎಲ್ಲಾ ಮಾಹಿತಿ ನೀಡುತ್ತೇನೆ ಎಂದು ವಿವರಣೆ ನೀಡಿದರು. ರೇವಣ್ಣ ಮಾತಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನೋಡಿ ನಾನು ನಿಮ್ಮ ಇಲಾಖೆ ಬಗ್ಗೆ ದೂಷಿಸುತ್ತಿಲ್ಲ. ಎಲ್ಲಿ ತಪ್ಪಾಗಿದೆ ಅದನ್ನು ಸರಿಪಡಿಸಿಕೊಳ್ಳಿ ಅಂತ ಹೇಳುತ್ತಿದ್ದೇನೆ ಎಂದು ಹೇಳಿದರು. ಆಗ ರೇವಣ್ಣ, ನೀವು ಹಿರಿಯರು. ನಿಮ್ಮ ಸಲಹೆ ತೆಗೆದುಕೊಳ್ಳುವೆ ಎಂದು ಹೇಳಿ ಸುಮ್ಮನಾದರು.