ಬೆಂಗಳೂರು : ನಮ್ಮದು ಸ್ವಾತಿ ನಕ್ಷತ್ರ. ಯಾರು ಏನೇ ಮಾಡಿದ್ರು ನಮಗೆ ಏನು ಅಗಲ್ಲ. ಯಾವುದೇ ಮಾಟ ಮಂತ್ರ ಏನು ಪ್ರಭಾವ ಬೀರಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನನಗೆ ಯಾವುದೇ ಆಸೆ ಇಲ್ಲ. ನನಗೆ ಉಪಮುಖ್ಯಮಂತ್ರಿ ಸ್ಥಾನವೂ ಬೇಡ. ಆದರೆ ಯೋಗ ಬಂದಾಗ ಯಾರು ಏನು ಬೇಕಾದ್ರು ಅಗಬಹುದು ಎಂದು ಮಾರ್ಮಿಕವಾಗಿ ನುಡಿದರು.
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟರೆ ಪೊಳ್ಳೆದ್ದು ಹೋಗ್ತಿನಿ. ನನ್ನ ಗೌರವ ನಾನೇ ಹಾಳು ಮಾಡಿಕೊಂಡಂತೆ. ಹೀಗಾಗಿ ನಾನು ಅವರ ಬಗ್ಗೆ ಮಾತನಾಡಲ್ಲ ಎಂದರು.
ಹಾಸನ ಜಿಲ್ಲಾದಿಕಾರಿ ಜೊತೆ ಡಿಶುಂ ಡಿಶುಂ ಆಗಿಲ್ಲ:
ಹಾಸನ ಜಿಲ್ಲಾಧಿಕಾರಿ ಜತೆ ನನಗೆ ಯಾವುದೇ ಡಿಶುಂ ಡಿಶುಂ ಆಗಿಲ್ಲ. ಯಾರ ಜತೆಯೂ ಜಗಳ ಮಾಡಬೇಕಾದ ಅಗತ್ಯವಿಲ್ಲ. ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ನಾನು ಮಾಹಿತಿ ಪಡೆದಿದ್ದೆ. ಬರ ಪರಿಹಾರಕ್ಕೆ 10 ಕೋಟಿ ರೂ. ಬಂದಿದ್ದರ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ ಬಿಡುಗಡೆ ಮಾಡಿರಲಿಲ್ಲ. ಆಡಳಿತದಲ್ಲಿ ನಾನು ತಲೆ ಹಾಕಲ್ಲ. ಮಾಧ್ಯಮಗಳ ಮುಂದೆ ಅನುದಾನ ಬಿಡುಗಡೆ ಮಾಡಲು ಹೇಳಿದ್ದೆ. ಬಿತ್ತನೆ ಆಲೂಗಡ್ಡೆ ಬಗ್ಗೆ ಸಮಸ್ಯೆಯಾಗಬಾರದು. ಈ ಹಿಂದೆ ಇದೆ ಕಾರಣಕ್ಕೆ ಗೋಲಿಬಾರ್ ಆಗಿತ್ತು. ಹಿಂದಿನ ಜಿಲ್ಲಾಧಿಕಾರಿಗಳಿಗೆ ಇದರ ಬಗ್ಗೆ ಎಲ್ಲಾ ಮಾಹಿತಿ ಇದೆ. ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಅಂತ ಹೇಳಿದ್ದೇನೆ. ವೈಯಕ್ತಿಕ ಕಾರಣಗಳಿಂದ ಜಿಲ್ಲಾಧಿಕಾರಿ ಜೊತೆ ಹೊಡೆದಾಟ ಮಾಡಿಲ್ಲ. ಜನರ ಸಮಸ್ಯೆಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಹೇಳಿದರು.
ಬರಗಾಲ ನಿರ್ವಹಣೆ, ಕುಡಿಯುವ ನೀರಿಗೆ ಹಣ ಬಂದಿತ್ತು.ಅದನ್ನ ಬಳಸದೆ ಪಿಡಿ ಖಾತೆಯಲ್ಲಿ ಇಟ್ಕೊಂಡಿದ್ರು. ಮೀಟಿಂಗ್ ಕರೆದ ಕೂಡಲೆ ಅದನ್ನು ಬಿಡುಗಡೆ ಮಾಡೋದಕ್ಕೆ ಹೇಳಿದ್ದೀನಿ.ಆಲೂಗಡ್ಡೆ ಬೆಳೆ ಹಾಕಿರುವ ರೈತರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಿ ಎಂದಿದ್ದೇನೆ. ಒಂದು ವೇಳೆ ಏನಾದ್ರೂ ಸಮಸ್ಯೆಯಾದ್ರೆ ರೈತರಿಗೆ ಕಷ್ಟ ಆಗುತ್ತದೆ. ನಾನು ಜನರಿಗೆ ಬಡವರಿಗೆ ಕೆಲಸ ಆಗಬೇಕು ಅಷ್ಟೇ. ನನ್ನ ವೈಯಕ್ತಿಕ ಯಾವುದೇ ಕೆಲಸಗಳು ಕೇಳಿಲ್ಲ ಎಂದು ಡಿಸಿಗೆ ತಿರುಗೇಟು ನೀಡಿದರು.