ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಬೆಂಗಳೂರು:ನನ್ನ ರಾಜಕೀಯ ಜೀವನದಲ್ಲಿ ಹಣಕ್ಕಾಗಿ ಒಂದೇ ಒಂದು ವರ್ಗಾವಣೆಯನ್ನು ಮಾಡಿರುವುದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಕುರಿತಂತೆ ಸಿಎಂ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಶಾಲಾ ಕಟ್ಟಡಗಳನ್ನು ಸಿ.ಎಸ್.ಆರ್. ನಿಧಿಯಿಂದ ನಿರ್ಮಿಸಲಾಗುತ್ತಿದೆ. ಸಚಿವ ಹೆಚ್.ಸಿ.ಮಹದೇವಪ್ಪ ಅವರು ಅದನ್ನು ಪಟ್ಟಿಯಲ್ಲಿ ನೀಡಿದ್ದಾರೆ. ಪಟ್ಟಿಯಲ್ಲಿ ಐದು ಹೆಸರು ಇದ್ದರೆ ಅದು ವರ್ಗಾವಣೆಯಾಗುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ವಿದ್ಯುತ್ ಕಳ್ಳತನ ಪ್ರಕರಣ ಮುಚ್ಚಿಹಾಕಲು ಯತೀಂದ್ರನ ಮೇಲೆ ವರ್ಗಾವಣೆ ಆರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ಮಗನಾಗಿ ಅಕ್ರಮವಾಗಿ ವಿದ್ಯುತ್ ತೆಗೆದುಕೊಂಡು ಮನೆ ಬೆಳಗಿಸಿರುವುದು ಅಪರಾಧವಲ್ಲವೇ?. ಅದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಸಾಕ್ಷಿ ಇಲ್ಲದೆ ಕುಮಾರಸ್ವಾಮಿ ಏನು ಬೇಕಾದರೂ ಹೇಳಬಹುದಾ?. ಯಾರೇ ತಪ್ಪು ಮಾಡಿದರೂ ಎಫ್.ಐ.ಆರ್ ಆಗಬೇಕು. ಅದನ್ನು ಮುಚ್ಚಿಹಾಕಲು ಹೀಗೆ ಹೇಳುತ್ತಿದ್ದಾರೆ. ಅದು ಸಿಎಸ್‌ಆರ್ ಲಿಸ್ಟ್. ಶಾಲಾ ಕಟ್ಟಡಗಳನ್ನು ಸಿಎಸ್‌ಆರ್ ಫಂಡ್ನಿಂದ ರಿಪೇರಿ ಮಾಡಿಸಲಾಗುತ್ತಿದೆ. ಅದರ ಬಗ್ಗೆ ಯತೀಂದ್ರ ಮಾತನಾಡಿದ್ದಾರೆ. ಯತೀಂದ್ರ ವರ್ಗಾವಣೆ ಬಗ್ಗೆ ಮಾತಾಡಿಲ್ಲ. ಸಿಎಸ್‌ಆರ್ ಫಂಡ್ ಬಗ್ಗೆ ಮಾತಾಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ ಎಂದು ಸಿಎಂ ಹೇಳಿದರು.
ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದಾನೆ. ಕೆಡಿಪಿ ಸದಸ್ಯ ಕೂಡ ಆಗಿದ್ದಾನೆ. ನಾನು ಸಿಆರ್‌ಎಸ್ ಫಂಡ್ ಏನಾಯ್ತು ಅಂತಾ ಕೇಳಿದೆ. ಮಹಾದೇವ್ಗೆ ಹೇಳಿದ್ದೇನೆ, ಲಿಸ್ಟ್ ಕೊಟ್ಟಿದ್ದೇನೆ ಅಂತಾ ಹೇಳಿದೆ. ಇದು ವರ್ಗಾವಣೆ ಪಟ್ಟಿನಾ? ಎಂದು ಸಿಎಂ ಪ್ರಶ್ನಿಸಿದರು. ಕುಮಾರಸ್ವಾಮಿ ಕಾಲದಲ್ಲಿ ಏನು ವರ್ಗಾವಣೆ ನಡೆಯುತ್ತಿತ್ತು. ಈಗಲೂ ಅದೇ ನಡೆಯುತ್ತಿದೆ ಅಂದುಕೊಂಡಿದ್ದಾರೆ. ಯತೀಂದ್ರ ದುಡ್ಡಿನ ವಿಚಾರ ಮಾತನ್ನಾಡಿದ್ದಾರಾ ನೀವೆ ಹೇಳಿ. ನಾನು ವಿದ್ಯುತ್ ಕಳವು ಸಂಬಂಧ ಎಫ್ಐಆರ್ ಹಾಕಿ ಅಂತಾ ಹೇಳಿಲ್ಲ. ಯಾರೇ ತಪ್ಪು ಮಾಡಿದರೂ ಎಫ್ಐಆರ್ ದಾಖಲಿಸಿ, ತಪ್ಪಿದ್ದರೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಒಎಸ್‍ಡಿ ಮಹದೇವ್ ಅವರಿಗೆ ಅಕ್ರಮವಾಗಿ ಬಡ್ತಿ ನೀಡಿ ಇಟ್ಟುಕೊಳ್ಳಲಾಗಿದೆ ಎಂಬ ಬಗ್ಗೆ ಉತ್ತರಿಸಿ, ಮಹದೇವ್ ಅವರು ನಮ್ಮೂರಿನವರೇ. ಅವರು ಉಪ ನೋಂದಣಾಧಿಕಾರಿ ಆಗಿದ್ದಾರೆ. ಅವರನ್ನು ನಮ್ಮ ಕಚೇರಿಗೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ ತಪ್ಪೇನು? ವಿಡಿಯೋದಲ್ಲಿ ಹಣ ಅಥವಾ ವರ್ಗಾವಣೆಯ ಬಗ್ಗೆ ಮಾತನಾಡಿದ್ದಾರೆಯೇ? ಎಂದು ಪ್ರಶ್ನಿಸಿದ ಸಿಎಂ, ಮಾತನಾಡಿದ್ದನ್ನೇ ವರ್ಗಾವಣೆಗೆ ತಳಕು ಹಾಕಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇಂದಿನವರೆಗೆ ಒಂದು ವರ್ಗಾವಣೆಗೆ ಹಣ ಪಡೆದಿದ್ದೇನೆ ಎಂದು ನಿರೂಪಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಪುನರುಚ್ಚರಿಸಿದರು.
ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್: ನಿನ್ನೆ ವರುಣಾ ವಿಧಾನಸಭಾ ಕ್ಷೇತ್ರದ ಕೀಳನಪುರ ಗ್ರಾಮದ ಬಳಿ ಜನಸಂಪರ್ಕ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾಲ್ಗೊಂಡು, ಜನರ ಮನವಿ ಸ್ವೀಕರಿಸಿ, ಸ್ಥಳದಲ್ಲೇ ಪರಿಹಾರ ನೀಡಲು ಸೂಚಿಸುತ್ತಿದ್ದರು. ಈ ಸಂದರ್ಭದಲ್ಲಿ ತಂದೆಯೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದಾಗ, ಸ್ಥಳೀಯ ಗ್ರಾಮದ ಮುಖಂಡರು, ಜನಸಂಪರ್ಕ ಸಭೆಯಲ್ಲಿ ಇದ್ದರು. ಆ ಸಂದರ್ಭದಲ್ಲಿ ತಂದೆ ಜೊತೆ ಜನರ ಮುಂದೆಯೇ ತಮ್ಮ ಪಿಎ ಮೊಬೈಲ್ ಮೂಲಕ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, "ನಾನು ನೀಡಿರುವ ನಾಲ್ಕೈದು ಹೆಸರು ಮಾತ್ರ ಮಾಡಿ. ಮಹಾದೇವ್ ನೀಡಿರುವ ಲಿಸ್ಟ್ ಮಾಡಬೇಡಿ" ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿ ವೈ ವಿಜಯೇಂದ್ರ ಮಠಗಳಿಗೆ ಭೇಟಿ; ರಾಜ್ಯ ಪ್ರವಾಸಕ್ಕೂ ಸಜ್ಜು