ಆನೇಕಲ್(ಬೆಂಗಳೂರು): ಕೊರೊನಾ ಲಾಕ್ಡೌನ್ನಿಂದಾಗಿ ಮೃಗಾಲಯಗಳು ಬಂದ್ ಆಗಿರುವುದರಿಂದ ಪ್ರಾಣಿಗಳ ನಿರ್ವಹಣೆ ಕಷ್ಟಕರವಾಗಿತ್ತು. ಇದನ್ನು ಅರಿತ ವಾಯುನೆಲೆ ನಿವೃತ್ತ ವಿಂಗ್ ಕಮಾಂಡರ್ ಒಬ್ಬರು ಜಿರಫೆಯೊಂದನ್ನು ದತ್ತು ಪಡೆದಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಪ್ರಾಣಿ ಪ್ರಿಯರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಶಾಸಕರು ಸೇರಿದಂತೆ ಹಲವು ಪಾಲಿಕೆ ಸದಸ್ಯರು ಆನೆ ಹಾಗೂ ಹುಲಿ ದತ್ತು ಪಡೆದ ಬೆನ್ನಲ್ಲೇ ವಾಯುನೆಲೆ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ, ಜಿರಾಫೆಯೊಂದನ್ನು ದತ್ತು ಪಡೆದು ತಮ್ಮ ಪ್ರಾಣಿ ಪ್ರೀತಿಯನ್ನು ತೋರಿದ್ದಾರೆ.
ಉದ್ಯಾನವನದ ಹೊಸ ಅತಿಥಿಯಾಗಿ ಆಗಮಿಸಿದ್ದ ಜಿರಾಫೆ ಯಧುನಂದನ್‍ನನ್ನು ದತ್ತು ಪಡೆಯಲು ನಿಗದಿಯಾಗಿದ್ದ ಒಂದು ಲಕ್ಷ ರೂ. ಚೆಕ್ ನೀಡಿ ದತ್ತು ಪಡೆದ್ದಾರೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿನ ಕೃಷ್ಣರಾಜ ಮತ್ತು ಬಬ್ಲಿ ಜೋಡಿಗೆ ಜನಿಸಿದ ಒಂದು ವರ್ಷ ಆರು ತಿಂಗಳ ಗಂಡು ಜಿರಾಫೆ ಯಧುನಂದನ್, ಕಳೆದ ತಿಂಗಳಷ್ಟೇ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸಿತ್ತು.