ಬೆಂಗಳೂರು: ಇಷ್ಟು ದಿವಸ ಒಂದೊಂದು ಅವಾಂತರದಲ್ಲಿ ಎಂಟ್ರಿ ಕೊಡ್ತಿದ್ದ ಕಳ್ಳರ ಗ್ಯಾಂಗ್ ಇದೀಗ ಮುಖಕ್ಕೆ ಮಸಿ ಬಳಿದು ರಾಬರಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ.. ನಗರದ ಅಮೃತಹಳ್ಳಿಯ ವಿನಾಯಕ ನಗರದಲ್ಲಿ ಗ್ಯಾಂಗ್ನ ಕರಾಮತ್ತು ಬೆಳಕಿಗೆ ಬಂದಿದೆ. ಜನವರಿ 11ರ ಸಂಜೆ 7 ಗಂಟೆಗೆ ನಿವೃತ್ತ ಪೊಲೀಸ್ ಅಧಿಕಾರಿ ಮನೆಗೆ ಎಂಟ್ರಿ ಕೊಟ್ಟ ಈ ಗ್ಯಾಂಗ್, ಮೊದಲೇ ಸ್ಕೆಚ್ ಹಾಕಿ ನಿವೃತ್ತ ಅಧಿಕಾರಿ ಪತ್ನಿ ಹಾಗೂ ಮಗಳು ಮನೆಯಲ್ಲಿ ಮಾತ್ರ ಇದ್ದಿದ್ದನ್ನ ಗಮನಿಸಿ ಮನೆಯ ಬಾಗಿಲು ಎದುರು ನಿಂತಿದ್ದಾರೆ.
ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿ ಮಗಳು ತರಕಾರಿ ತರೋದಕ್ಕೆ ಹೋಗಲು ಡೋರ್ ಓಪನ್ ಮಾಡಿದಾಗ, ಬಾಗಿಲು ಮುಂದೆ ಮುಖಕ್ಕೆ ಮಸಿ ಬಳಿದುಕೊಂಡು ಡೋರ್ ಮುಂದೆ ಪ್ರತ್ಯಕ್ಷವಾಗಿ ಕ್ಷಣ ಮಾತ್ರದಲ್ಲಿ ಮಗಳನ್ನು ಒಳಗೆ ನೂಕಿ ಡೋರ್ ಲಾಕ್ ಮಾಡಿದ್ದಾರೆ. ಹಣ, ಚಿನ್ನಾಭರಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ.
ಈ ವೇಳೆ ಗಾಬರಿಯಿಂದ ಕಿರಿಚಾಟ ಮಾಡಿದಾಗ ಚಿನ್ನಾಭರಣ ಕೊಡದಿದ್ರೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುವುದಾಗಿ ಹೆದರಿಸಿದ್ದಾರೆ. ಇದರಿಂದ ಭಯಗೊಂಡ ನಿವೃತ್ತ ಅಧಿಕಾರಿ ಪತ್ನಿ ಮಾಂಗಲ್ಯ ಸರ ಸೇರಿ ಇತರೆ ಒಡವೆಗಳನ್ನು ಬಿಚ್ಚಿಕೊಟ್ಟಿದ್ದಾರೆ. ಕೂಡಲೇ ಅದನ್ನೆಲ್ಲ ತಗೊಂಡು ಕಳ್ಳರು ಎಸ್ಕೇಪ್ ಆಗಿದ್ದಾರೆ. ಕೆಲವೇ ನಿಮಿಷದಲ್ಲಿ ಅಧಿಕಾರಿ ಮನೆಗೆ ಎಂಟ್ರಿ ಕೊಟ್ಟಾಗ ದುಷ್ಕರ್ಮಿಗಳು ಒಡವೆ ಸಮೇತ ಪರಾರಿಯಾಗಿದ್ದಾರೆ. ಇದಾದ ಬಳಿಕ ತಾಯಿ ಮತ್ತು ಮಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನಾಧರಿಸಿ ಆರೋಪಿಗಳ ಶೋಧಕ್ಕೆ ಅಮೃತಹಳ್ಳಿ ಪೊಲೀಸರು ಮುಂದಾಗಿದ್ದಾರೆ.