ಬೆಂಗಳೂರು:ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷಾ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಸಂಜೆ ನಿಧನರಾಗಿದ್ದಾರೆ.
67 ವರ್ಷದ ನಿವೃತ್ತ ಅಧಿಕಾರಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಬೆಂಗಳೂರು ಮಹಾನಗರ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ರಾಜ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯದರ್ಶಿಯಾಗಿ ಕೂಡ ಇವರು ಕಾರ್ಯನಿರ್ವಹಿಸಿದ್ದರು. ಸಚಾರ್ ಆಯೋಗದ ವರದಿಯ ಶಿಫಾರಸುಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಲ್ಲಿ ಪಾಷಾ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ತಮ್ಮ ಸೇವೆಯಿಂದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಪ್ರಸಿದ್ಧರಾಗಿದ್ದರು.
ಜಮೀರ್ ಪಾಷಾ ತಮ್ಮ ವೃತ್ತಿಯಿಂದ ನಿವೃತ್ತರಾದ ನಂತರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು. ಅಲ್ಲದೇ 2018ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದ ಟಿಕೆಟ್ ಬಯಸಿ ಕಡೆ ಕ್ಷಣದಲ್ಲಿ ವಂಚಿತರಾಗಿದ್ದರು. 1999ರಲ್ಲಿ ಇವರು ಕೋಲಾರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಮಾಡಿದ್ದ ಜನಪರ ಕೆಲಸವನ್ನು ಚುನಾವಣೆ ಗೆಲುವಿಗಾಗಿ ಬಳಸಿಕೊಳ್ಳಲು ಬಯಸಿದ್ದರು.
ಓದಿ:ವರ್ತೂರು ಕಿಡ್ನಾಪ್ ಕೇಸ್: ರೂಟ್ ಮಾಹಿತಿ ಕಲೆ ಹಾಕಿದ ಪೊಲೀಸರು
2012 ರ ಜೂನ್ನಲ್ಲಿ ಅವರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಇದು ಅವರು ನಿವೃತ್ತಿಯಾಗುವುದಕ್ಕೆ 9 ದಿನ ಮುನ್ನ ಎನ್ನುವುದು ವಿಶೇಷ. ಆದಾಯದ ಮಿತಿಗಿಂತ ಶೇ. 27.2 ರಷ್ಟು ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎಂಬ ಆರೋಪವೂ ಇವರ ಮೇಲಿತ್ತು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಆರು ವರ್ಷಗಳ ನಂತರ ಅಂದರೆ 2018ರ ಮೇ.29 ರಂದು ಇವರ ವಿರುದ್ಧ ಚಾರ್ಚ್ಶೀಟ್ ಸಲ್ಲಿಸಿದ್ದರು. ಇದೇ ವೇಳೆ ಪಾಷಾ ಅಸಮಾನ ಆಸ್ತಿಗಳ ಪ್ರಮಾಣವನ್ನು ಶೇ.13.4 ಕ್ಕೆ ಇಳಿಸಿ, ಇದು ಅಂದಾಜು 19 ಲಕ್ಷ ರೂ. ಎಂದು ವಿವರಿಸಿದ್ದರು. ಈ ವರ್ಷದ ಆಗಸ್ಟ್ನಲ್ಲಿ, ಇವರ ಮನವಿಯ ಮೇರೆಗೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿತ್ತು. ಹೈಕೋರ್ಟ್ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ, ಆದಾಯ ಮೀರಿ ಆಸ್ತಿಗಳಿಸಿದ ಪ್ರಕರಣದಲ್ಲಿ ಬಿಡುಗಡೆ ಮಾಡುವ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
ಜಮೀರ್ ಪಾಷಾ ಹುಟ್ಟಿ ಬೆಳೆದದ್ದು ಬೆಂಗಳೂರಿನ ಮಾಗಡಿ ತಾಲೂಕಿನಲ್ಲಿ. ಬೆಂಗಳೂರಿನ ರಿಚ್ಮಂಡ್ ಟೌನ್ನಲ್ಲಿರುವ ಅವರ ನಿವಾಸದಲ್ಲಿ ಕುಟುಂಬದ ಜೊತೆ ವಾಸಿಸುತ್ತಿದ್ದರು. ಕೊರೊನಾಗೆ ತುತ್ತಾಗಿದ್ದ ಅವರು ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜಮೀರ್ ಪಾಷಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.