ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದ್ದ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆ ಮುಂಚೂಣಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಮುದ್ದಪ್ಪ (99) ನಿನ್ನೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಮೂಲತಃ ಕೆ.ಆರ್. ನಗರದವರಾದ ಮುದ್ದಪ್ಪ, ಕಾನೂನು ಪದವಿ ಪಡೆದು ನಂತರ ಐಎಎಸ್ ಪಾಸ್ ಆಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮದ ಜನರಲ್ ಮ್ಯಾನೇಜರ್ ಆಗಿದ್ದ ವೇಳೆ ಸಾರಿಗೆ ಸಚಿವರಾಗಿದ್ದ ದಿ. ಡಿ. ದೇವರಾಜ ಅರಸು ಅವರ ಒತ್ತಾಸೆಯಂತೆ ಕೆಂಪೇಗೌಡ ಬಸ್ ನಿಲ್ದಾಣ ನಿರ್ಮಾಣಕ್ಕೆ ಶ್ರಮಿಸಿದರು. ದಿ. ಆರ್.ಗುಂಡೂರಾವ್ ಸಾರಿಗೆ ಸಚಿವರಾಗಿದ್ದಾಗ ಬಿಎಂಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ನೆರವಾಗಿದ್ದರು. ಗ್ರಾಹಕ ಮಹಾ ಮಂಡಲದ ವ್ಯವಸ್ಥಾಪಕ ನಿರ್ದೇಶಕರಾಗಿ ಜನತಾ ಬಜಾರ್ ಪ್ರಾರಂಭಿಸಲು ಕಾರಣಕರ್ತರಾಗಿದ್ದರು
ಕೆಎಂಎಫ್ ಬೆಳವಣಿಗೆಗೆ ಪ್ರಮುಖ ಪಾತ್ರ:ಕರ್ನಾಟಕ ಡೈರಿ ಡೆವಲಪ್ಮೆಂಟ್ ಕಾರ್ಪೋರೇಷನ್ನ ವ್ಯವಸ್ಥಾಪಕ ನಿರ್ದೇಶಕರಾಗಿ ವಿಶ್ವಬ್ಯಾಂಕ್ ನಿಂದ ಸಾಲ ತಂದು ಇಂದಿನ ಕೆಎಂಎಫ್ ಬೆಳವಣಿಗೆಗೆ ಪ್ರಮುಖ ಪಾತ್ರ ವಹಿಸಿದ್ದರು.
ಮೈಸೂರು ಮಹಾನಗರ ಪಾಲಿಕೆಯ ಮೊದಲ ಆಡಳಿತಾಧಿಕಾರಿಯಾಗಿದ್ದರು. ಸಿದ್ದಗಂಗಾ ಮಠ, ಬೆಂಗಳೂರಿನ ಸರ್ಪಭೂಷಣ ಶಿವಯೋಗಿಗಳ ಮಠದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಡಾ. ಎಂ.ಸಿ. ಮೋದಿ ಟ್ರಸ್ಟ್, ನಿಜಲಿಂಗಪ್ಪ ಟ್ರಸ್ಟ್ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಅನ್ನಪೂರ್ಣ ಟ್ರಸ್ಟ್ ರಾಜ್ಯ ಸೇವಾರತ್ನ ಎಂಬ ಬಿರುದು ನೀಡಿದೆ.