ಬೆಂಗಳೂರು:ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ ಜೀವ ವೈವಿಧ್ಯತೆಗೆ ಹುಬ್ಬಳ್ಳಿ - ಅಂಕೋಲಾ ರೈಲ್ವೆ ಮಾರ್ಗವು ಹಾನಿಕಾರಕವಾಗಿದೆ. ಯೋಜನೆ ಜಾರಿ ಮಾಡುವ ಅಗತ್ಯತೆ ಇಲ್ಲ ಎಂದು ಉತ್ತರ ಕರ್ನಾಟಕ ನಿವೃತ್ತ ಅರಣ್ಯ ಅಧಿಕಾರಿಗಳ ಸಂಘವು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಪತ್ರ ಬರೆದಿದೆ.
ಪಶ್ಚಿಮ ಘಟ್ಟಗಳಲ್ಲಿರುವಷ್ಟು ಜೈವಿಕ ವೈವಿಧ್ಯತೆ ದಕ್ಷಿಣ ಭಾರತದ ಬೇರೆ ಯಾವುದೇ ಜಿಲ್ಲೆಯಲ್ಲೂ ಕಂಡು ಬರುವುದಿಲ್ಲ. ಇಲ್ಲಿ ವಿಶಿಷ್ಟವಾದ ಜೈವಿಕ ಪರಿಸರ ಪ್ರಕ್ರಿಯೆಗಳು ನಡೆಯಲಿವೆ. ಈ ಯೋಜನೆಯಿಂದ ಅಳಿವಿನಂಚಿನಲ್ಲಿರುವ 325ಕ್ಕೂ ಹೆಚ್ಚು ಜಾತಿಯ ಸಸ್ಯ, ಪ್ರಾಣಿ, ಪಕ್ಷಿಗಳು, ಸರಿಸೃಪಗಳಿಗೆ ಹಾನಿಯಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ, ಅಸಂಖ್ಯಾತ ಔಷಧೀಯ ಗುಣವುಳ್ಳ ಸಸ್ಯಗಳು, ಹಣ್ಣಿನ ಜಾತಿಯ ಹಲವು ರೀತಿಯ ಬೃಹತ್ ಮರಗಳು ಮತ್ತು ವಿಶಾಲವಾದ ಹುಲ್ಲುಗಾವಲು ಹೊಂದಿದ್ದು ಜಲಾನಯನ ಪ್ರದೇಶವಾಗಿದ್ದು, ರೈಲು ಯೋಜನೆಯಿಂದ ಇದಕ್ಕೆ ಹಾನಿಯಾಗಲಿದೆ.
ಯೋಜನೆಗಾಗಿ ಸುಮಾರು ಎರಡು ಲಕ್ಷ ಮರಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ, ಗಿಡಗಂಟಿ ಮತ್ತು ಕುರುಚಲು ಗಿಡಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದಾರೆ. ಇದರಿಂದ ಮಣ್ಣಿನ ಸವಕಳಿಗೆ ಕಾರಣವಾಗಲಿದ್ದು, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೇ, ಹುಲಿ ಮತ್ತು ಆನೆ ಕಾರಿಡಾರ್ಗೆ ತೊಂದರೆಯಾಗಲಿದೆ ಮತ್ತು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಡುವಿನ ಪ್ರಾಣಿಗಳ ಸಂಪರ್ಕಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಇದರಿಂದ ಹುಲಿಗಳ ದೀರ್ಘಕಾಲೀನ ಸಂರಕ್ಷಣೆಗೆ ಗಂಭೀರ ಪರಿಣಾಮ ಬೀರಲಿದೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಅಲ್ಲಿನ ಜೀವವೈವಿಧ್ಯತೆಯನ್ನು ಉಳಿಯಬೇಕಾಗಿದ್ದರಿಂದ ಯೋಜನೆ ಜಾರಿ ಮಾಡುವ ಅಗತ್ಯವಿಲ್ಲ ಎಂದು ಸಂಘದ ಅಧ್ಯಕ್ಷ ಎಸ್.ಬಿ ಸದಾನಿ ಅವರು ಕೇಂದ್ರ ಪರಿಸರ ಇಲಾಖೆಯ ಡಿಐಜಿ ಅವರಿಗೆ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ:ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ.. ಹೈಕೋರ್ಟ್ ಆದೇಶದಿಂದ ಹೋರಾಟ ಸಮಿತಿಗೆ ಸಂತಸ