ಕರ್ನಾಟಕ

karnataka

ETV Bharat / state

ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ನಿಧನ, ಸಿಎಂ ಸಂತಾಪ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ಅನಾರೋಗ್ಯದಿಂದ ಇಂದು ಇಹಲೋಕ ತ್ಯಜಿಸಿದ್ದಾರೆ.

ಪಿ.ಬಿ.ಮಹಿಷಿ ನಿಧನ
ಪಿ.ಬಿ.ಮಹಿಷಿ ನಿಧನ

By ETV Bharat Karnataka Team

Published : Oct 16, 2023, 10:40 PM IST

ಬೆಂಗಳೂರು: ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ಅವರು ಅನಾರೋಗ್ಯದಿಂದ ಸೋಮವಾರ ನಿಧನರಾದರು.‌ ಇವರು 31-12-2006 ರಿಂದ 07-02-2008 ರವರೆಗೆ ಮುಖ್ಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. 1972ನೇ ಬ್ಯಾಚ್‍ನ ಐಎಎಸ್ ಅಧಿಕಾರಿಯಾಗಿದ್ದರು. ಪತ್ನಿ ಮೀನಾಕ್ಷಿ ಅವರನ್ನು ಅಗಲಿದ್ದಾರೆ.

ಚಂದ್ರಶೇಖರ್ ಭಾರತದ ಪ್ರಧಾನ ಮಂತ್ರಿಗಳಾಗಿದ್ದಾಗ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಪ್ರಹ್ಲಾದ್ ಮಹಿಷಿ 1972ನೆಯ ಸಾಲಿನ ಐಎಎಸ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅನೇಕ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. 2006ರಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಮಹತ್ವದ ಹೊಣೆಗಾರಿಕೆ ನಿರ್ವಹಿಸಿದ್ದರು.

ಕರ್ನಾಟಕ ರಾಜ್ಯ ವಿದ್ಯುತ್ ನಿಗಮವನ್ನು ಲಾಭದ ಕಡೆಗೆ ಕರೆತಂದ ಹೆಗ್ಗಳಿಕೆ ಇವರದ್ದಾಗಿತ್ತು. ತಮ್ಮ ವರದಿಯ ಮೂಲಕ ಕನ್ನಡಕ್ಕೆ ಮಹತ್ವದ ಸ್ಥಾನಮಾನ ನೀಡಿದ ಹೆಗ್ಗಳಿಕೆಯ ಸರೋಜಿನಿ ಮಹಿಷಿಯವರ ಸೋದರರಾಗಿದ್ದರು. ಸದಾ ಅಧ್ಯಯನಶಿಲರಾಗಿದ್ದು ಅಪಾರವಾದ ಗ್ರಂಥ ಭಂಡಾರ ಪ್ರೇಮ ಹೊಂದಿದ್ದರು. ಅದರ ಪರಿಣಾಮವೇ ಅವರಲ್ಲಿ ಹಲವು ಮಹತ್ವದ ಗ್ರಂಥಗಳ ಸಂಗ್ರಹವಿತ್ತು. ಚಿತ್ರರಂಗದ ಬಗ್ಗೆ ಕೂಡ ಅಪಾರ ಆಸಕ್ತಿ ಹೊಂದಿದ್ದು ಹಲವು ಅಪರೂಪದ ಚಲನಚಿತ್ರಗಳನ್ನು ತಮ್ಮ ಸಂಗ್ರಹದಲ್ಲಿ ಹೊಂದಿದ್ದರು.

ಪ್ರಹ್ಲಾದ್ ಮಹಿಷಿ ಪತ್ನಿ ಡಾ.ಮೀನಾ ದೇಶಪಾಂಡೆಯವರು ಪ್ರಸ್ತುತ ಭಾರತೀಯ ವಿದ್ಯಾ ಭವನದ ಗಾಂಧಿ ಕೇಂದ್ರದ ನಿರ್ದೇಶಕರಾಗಿದ್ದು ಮಹಾತ್ಮ ಗಾಂಧಿ ಸಂಪುಟಗಳು ಕನ್ನಡಕ್ಕೆ ಬರುವಲ್ಲಿ ಮುಖ್ಯ ಪಾತ್ರವಹಿಸಿದ್ದರು.

ಸಿಎಂ ಸಂತಾಪ:ಪಿ.ಬಿ.ಮಹಿಷಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ನಿಧನದ ಸುದ್ದಿ ದುಃಖವುಂಟುಮಾಡಿದೆ. 1972ನೇ ಐಎಎಸ್ ಬ್ಯಾಚಿನ ಅಧಿಕಾರಿಯಾಗಿದ್ದ ಮಹಿಷಿ ಅವರು ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ದುಃಖತಪ್ತ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ:ಹೃದಯಾಘಾತದಿಂದ ಅರಭಾವಿ ದುರದುಂಡೇಶ್ವರ ಮಠದ ಸ್ವಾಮೀಜಿ ನಿಧನ: ಶೋಕ ಸಾಗರದಲ್ಲಿ ಮುಳುಗಿದ ಭಕ್ತ ಸಮೂಹ

ABOUT THE AUTHOR

...view details