ಬೆಂಗಳೂರು: ಬಿಜೆಪಿ ಹಿರಿಯ ನಾಯಕರಾದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ನಾಲ್ವರು ಹಾಲಿ ಶಾಸಕರು ಸಕ್ರಿಯ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. ಅವರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಸ್ಪರ್ಧೆಗೆ ಇಳಿಸಲಾಗಿತ್ತು. ಆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಫಲಿತಾಂಶ ಇಂತಿದೆ..
ಬಿ.ಎಸ್.ಯಡಿಯೂರಪ್ಪ (ಶಿಕಾರಿಪುರ): ಶಿಕಾರಿಪುರದಲ್ಲಿ ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಗೆದ್ದು ಬೀಗಿದ್ದಾರೆ. ರಾಜ್ಯ ಬಿಜೆಪಿಯ ವರಿಷ್ಠ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸುದೀರ್ಘ ಚುನಾವಣಾ ರಾಜಕೀಯದಿಂದ ಈಗಾಗಲೇ ನಿವೃತ್ತಿ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ವಯಸ್ಸಿನ ಕಾರಣಕ್ಕೆ ಚುನಾವಣಾ ಕಣದಿಂದ ಹಿಂದೆ ಸರಿದ್ದಾರೆ. ಶಿಕಾರಿಪುರದಿಂದ 1983ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1999 ರಲ್ಲಿ ಶಿರಾಳಕೊಪ್ಪದ ಮಹಾಲಿಂಗಪ್ಪ ಅವರ ವಿರುದ್ದ ಒಮ್ಮೆ ಸೋಲು ಅನುಭವಿಸಿದ್ದರು. ನಂತರ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸುತ್ತಾ ವಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಗಾದಿಗೇರಿದ್ದು ಇತಿಹಾಸ.
ಮೊದಲ ಬಾರಿಗೆ ವಿಜಯೇಂದ್ರ ಚುನಾವಣಾ ಕಣ ಪ್ರವೇಶಿಸಿ, ಭಾರಿ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ನಿಂದ ಗೋಣಿ ಮಾಲತೇಶ್ ಸ್ಪರ್ಧಿಸಿದ್ದರು. ಕೈ ಟಿಕೆಟ್ ಕೈ ತಪ್ಪಿದ ಕಾರಣ ನಾಗರಾಜ ಗೌಡ ಬಂಡಾಯವಾಗಿ ಸ್ಪರ್ಧಿಸಿದ್ದರು. ವಿಜಯೇಂದ್ರ ಅವರಿಗೆ ನಾಗರಾಜ ಪೈಪೋಟಿ ಕೊಟ್ಟಿದ್ದರು. ಆದರೂ ವಿಜಯೇಂದ್ರ ಮುನ್ನಡೆ ಸಾಧಿಸಿ 11 ಸಾವಿರ ಮತಗಳ ಅಂತರದಲ್ಲಿ ವಿಜಯಶಾಲಿಯಾದರು.
ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ ನಗರ):ಈಶ್ವರಪ್ಪ ಬಿಟ್ಟುಕೊಟ್ಟ ಕ್ಷೇತ್ರದಲ್ಲಿ ಚನ್ನಬಸಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ.ಮತ್ತೊಬ್ಬ ಬಿಜೆಪಿಯ ಹಿರಿಯ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಿಲ್ಲ. ಹೀಗಾಗಿ ಅವರು ಟಿಕೆಟ್ ಘೋಷಣೆಗೂ ಮುನ್ನವೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರು. ಈ ಕ್ಷೇತ್ರದಲ್ಲಿ 1989ರಿಂದ ಐದು ಬಾರಿ ಗೆದ್ದಿರುವ ಈಶ್ವರಪ್ಪ, 1999 ಮತ್ತು 2013ರಲ್ಲಿ ಮಾತ್ರ ಸೋಲು ಕಂಡಿದ್ದರು.
ಈ ಬಾರಿ ಟಿಕೆಟ್ ಸಿಗದ ಕಾರಣ ಈಶ್ವರಪ್ಪ ಬದಲಿಗೆ ಅವರ ಮಗ ಅಥವಾ ಅವರ ಕುಟುಂಬದಲ್ಲಿ ಬೇರೆಯವರೆಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಕೊನೆ ಕ್ಷಣದಲ್ಲಿ ಚನ್ನಬಸಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿತು. ಮತ್ತೊಂದೆಡೆ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆಯನೂರು ಮಂಜುನಾಥ್ ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ನಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ನಿಂದ ಹೆಚ್.ಸಿ.ಯೋಗೇಶ ಕಣಕ್ಕಿಳಿದಿದ್ದರು. ಕ್ಷೇತ್ರ ಉಳಿಸಿಕೊಳ್ಳುವ ಜವಾಬ್ದಾರಿ ಬಿಜೆಪಿಯ ಚನ್ನಬಸಪ್ಪ ಹೆಗಲೇರಿತ್ತು. ಆ ಜವಾಬ್ದಾರಿಯನ್ನು ಚೆನ್ನಬಸಪ್ಪ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೆ, ಯೋಗೇಶ ವಿರುದ್ಧ 27 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.
ಹಾಲಾಡಿ ಶ್ರೀನಿವಾಸ ಶೆಟ್ಟಿ (ಕುಂದಾಪುರ):ಹಾಲಾಡಿ ಶ್ರಿನಿವಾಸ ಶೆಟ್ಟಿ ಬಿಟ್ಟುಕೊಟ್ಟ ಕ್ಷೇತ್ರದಲ್ಲಿ ಕಿರಣ್ ಕೊಡ್ಗಿ ವಿಜಯಶಾಲಿಯಾಗಿದ್ದಾರೆ.ಕರಾವಳಿ ಭಾಗದ ಬಿಜೆಪಿ ಹಿರಿಯ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡ ಈ ಬಾರಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಕುಂದಾಪುರ ಕ್ಷೇತ್ರದಿಂದ ಸತತ ಐದು ಬಾರಿ ಗೆದ್ದು ಶಾಸಕರಾಗಿದ್ದ ಅವರು ವಯಸ್ಸಿನ ಕಾರಣಕ್ಕೆ ಕಣದಿಂದ ದೂರ ಹೋಗಿದ್ದಾರೆ. ಇದರಿಂದ ಹೊಸ ಮುಖ ಕಿರಣ್ ಕೊಡ್ಗಿ ಅವರಿಗೆ ಕಮಲ ಪಕ್ಷ ಟಿಕೆಟ್ ನೀಡಿತ್ತು. ಸ್ವಯಂ ನಿವೃತ್ತಿ ಘೋಷಣೆ ಮಾಡಿರುವ ಹಾಲಾಡಿ ಅವರು ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದರು. ಕಾಂಗ್ರೆಸ್ನಿಂದ ದಿನೇಶ್ ಹೆಗ್ಡೆ ಮೊಳಹಳ್ಳಿ ಮತ್ತು ಜೆಡಿಎಸ್ನಿಂದ ರಮೇಶ್ ಸ್ಪರ್ಧಿಸಿದ್ದರು. ಇಲ್ಲೂ ಕೂಡ ಬಿಜೆಪಿ ಅಭ್ಯರ್ಥಿ ಕಿರಣ್ ಕೊಡ್ಗಿ ವಿಜಯಿಶಾಲಿಯಾಗಿದ್ದಾರೆ. 41 ಸಾವಿರ ಮತಗಳ ಅಂತರದಿಂದ ಭರ್ಜರಿಯಾಗಿಯೇ ಗೆದ್ದಿದ್ದಾರೆ.
ಎಸ್.ಎ.ರವೀಂದ್ರನಾಥ್ (ದಾವಣಗೆರೆ ಉತ್ತರ ಕ್ಷೇತ್ರ):ಅನಾರೋಗ್ಯದಿಂದ ಚುನಾವಣೆಯಿಂದ ಎಸ್.ಎ.ರವೀಂದ್ರನಾಥ ದೂರ ಉಳಿದಿದ್ದರು. ಈ ಕ್ಷೇತ್ರದಲ್ಲಿ ಇವರ ಬದಲಿಗೆ ಟಿಕೆಟ್ ನೀಡಿದ ಲೋಕಿಕೆರೆ ನಾಗರಾಜ್ ಸೋಲು ಅನುಭವಿಸಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಎಸ್.ಎ.ರವೀಂದ್ರನಾಥ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಹೀಗಾಗಿ ಇವರ ಬದಲು ಲೋಕಿಕೆರೆ ನಾಗರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಐದು ಬಾರಿ ಶಾಸಕರಾಗಿದ್ದ ರವೀಂದ್ರನಾಥ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅನಾರೋಗ್ಯದ ಕಾರಣದಿಂದ ಚುನಾವಣೆಯಿಂದ ದೂರ ಸರಿದಿದ್ದರು. ನಂತರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ತೊಡಗಿ ಬೆಂಬಲ ಸೂಚಿಸಿದ್ದರು.
ಲೋಕಿಕೆರೆ ನಾಗರಾಜ್ ಅವರಿಗೆ ಕಳೆದ ಬಾರಿ ಕಾಂಗ್ರೆಸ್ನ ಪರಾಜಿತ ಎಸ್.ಎಸ್.ಮಲ್ಲಿಕಾರ್ಜನ ತೀವ್ರ ಪೈಪೋಟಿ ನೀಡಿ ಗೆಲುವಿನ ಪತಾಕೆ ಹಾರಿಸಿದ್ದಾರೆ. 24 ಸಾವಿರ ಮತಗಳ ಅಂತರದಿಂದ ಲೋಕಿಕೆರೆ ವಿರುದ್ಧ ಮಲ್ಲಿಕಾರ್ಜುನ ಗೆದ್ದಿದ್ದಾರೆ.
ಇದನ್ನೂ ಓದಿ:ಮಹಾತೀರ್ಪಿಗೆ ಕರುನಾಡು ಸಜ್ಜು: ಕಮಲ ಅರಳುತ್ತಾ, 'ಕೈ' ಕಮಾಲ್ ಮಾಡುತ್ತಾ?.. ಜೆಡಿಎಸ್ ಆಗಲಿದೆಯಾ ಕಿಂಗ್ ಮೇಕರ್?