ಬೆಂಗಳೂರು : ರಾಜ್ಯದಲ್ಲಿರುವ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳೂ ಸೇರಿದಂತೆ ಒಟ್ಟು 30 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಂದಿನ 5 ವರ್ಷಗಳಲ್ಲಿ ಅತ್ಯುತ್ಕೃಷ್ಟವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ `ರೀತಿ’ (RETE- ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್) ಯೋಜನೆಗೆ ಆಯ್ಕೆ ಮಾಡಲಾಗಿದೆ. ಇದರಿಂದ ಎಲ್ಲ ಜಿಲ್ಲೆಗಳಲ್ಲೂ ಗುಣಮಟ್ಟದ ಇಂಜಿನಿಯರಿಂಗ್ ಶಿಕ್ಷಣ ನೀಡಲು ಅನುಕೂಲ ಆಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಎಂಜಿನಿಯರಿಂಗ್ ನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ 'ರೀತಿ' ಯೋಜನೆ, ಸಚಿವರಿಗೆ ವರದಿ ಸಲ್ಲಿಸಿದ ಪ್ರೊ ಕರಿಸಿದ್ದಪ್ಪ ನೇತೃತ್ವದ ಸಮಿತಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ನೇತೃತ್ವದ ಉನ್ನತಮಟ್ಟದ ಸಮಿತಿಯು ಇಂದು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಇದರ ಅಂಗವಾಗಿ ವಿಕಾಸಸೌಧದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಸರ್ಕಾರದ ಪರವಾಗಿ ವರದಿಯನ್ನು ಸ್ವೀಕರಿಸಿದರು.
ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ (`ರೀತಿ’) ಯೋಜನೆ:
ಬಳಿಕ ಮಾತನಾಡಿದ ಅವರು, 'ಜಿಲ್ಲೆಗೆ ತಲಾ ಒಂದರಂತೆ ಒಟ್ಟು 30 ಕಾಲೇಜುಗಳನ್ನು 'ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ (`ರೀತಿ’) ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಪರಿಪೋಷಣೆ (ಇನ್ಕ್ಯುಬೇಷನ್), ಆ್ಯಕ್ಸಲೇಟರ್ ಮತ್ತು ಸೂಪರ್-30 ಎನ್ನುವ ಮೂರು ವಿಭಾಗಗಳಡಿ ಪರಿಗಣಿಸಲಾಗಿದೆ. ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಇಂಜಿನಿಯರಿಂಗ್ ಸಂಸ್ಥೆಗಳನ್ನು ಆರಿಸಿಕೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ಜಿಲ್ಲೆಗಳಲ್ಲೇ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ರೂಪುರೇಷೆ ಸಿದ್ಧಪಡಿಸಲು ಹೋದ ವರ್ಷದ ನವೆಂಬರಿನಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿತ್ತು. ಜತೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಸೂಕ್ತ ಖಾಸಗಿ/ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಲು ಸರ್ಕಾರದ ನವೋದ್ಯಮ ವಿಷನ್ ಗ್ರೂಪ್ ಮುಖ್ಯಸ್ಥರಾದ ಪ್ರಶಾಂತ್ ಪ್ರಕಾಶ್ ನೇತೃತ್ವದಲ್ಲಿ ಉಪಸಮಿತಿ ರಚಿಸಲಾಗಿತ್ತು ಎಂದರು.
ಔದ್ಯಮಿಕ ಅರಿವು ಮತ್ತು ಸಂಶೋಧನೆ ಆಧಾರಿತ ತಾಂತ್ರಿಕ ಶಿಕ್ಷಣ :ಕಾಲೇಜು ಆಡಳಿತ ಮಂಡಳಿ, ಉದ್ಯಮರಂಗ ಮತ್ತು ವಿಟಿಯು ಮೂರೂ ಸೇರಿಕೊಂಡು `ರೀತಿ’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಿದ್ದು, ತಲಾ ಶೇ.33ರಷ್ಟು ವೆಚ್ಚ ಭರಿಸಲಿವೆ. ಇದು ಐತಿಹಾಸಿಕ ಕ್ರಮವಾಗಿದ್ದು, ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸೂಕ್ತ ಅವಕಾಶ ಒದಗಿಸಿದೆ. 2 ಮತ್ತು 3ನೇ ಸ್ತರದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಔದ್ಯಮಿಕ ಅರಿವು ಮತ್ತು ಸಂಶೋಧನೆ ಆಧಾರಿತ ತಾಂತ್ರಿಕ ಶಿಕ್ಷಣ ನೀಡುವುದು ಇದರ ಹೆಗ್ಗುರಿಯಾಗಿದೆ.
ಈ ಮೂಲಕ ರಾಜ್ಯದ ಉದ್ದಗಲಕ್ಕೂ ಉತ್ಕೃಷ್ಣ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿರಬೇಕೆಂಬ ಕನಸನ್ನು ನನಸು ಮಾಡಲಾಗುತ್ತಿದೆ ಎಂದು ಅವರು ಸಚಿವರು ಹೇಳಿದರು.
ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಈ ಕಾಲೇಜುಗಳಲ್ಲಿ ವಿದ್ಯಾರ್ಥಿಕೇಂದ್ರಿತ ಕೌಶಲ್ಯ ಮತ್ತು ಸಂಶೋಧನಾ ಬಹುಶಿಸ್ತೀಯ ಶಿಕ್ಷಣ ಒದಗಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಿ, ಅವರಲ್ಲಿ ಉದ್ಯಮಶೀಲತೆಯನ್ನೂ ಬೆಳೆಸಲಾಗುವುದು. ಜತೆಗೆ, ಈ 30 ಕಾಲೇಜುಗಳಲ್ಲಿ ಸ್ವಯಂ ಮೌಲ್ಯಮಾಪನ ಮತ್ತು `ಮೆಂಟರ್-ಆಡಿಟ್ ಮಾದರಿ’ ಮೂಲಕ ಉತ್ತರದಾಯಿತ್ವವನ್ನು ತರಲಾಗುವುದು ಎಂದು ಸಚಿವ ಅಶ್ವತ್ಥ ನಾರಾಯಣ ವಿವರಿಸಿದರು.
ಈ ವರದಿಯನ್ನು ಸಲ್ಲಿಸಿರುವ ಪ್ರೊ.ಕರಿಸಿದ್ದಪ್ಪ ನೇತೃತ್ವದ ಸಮಿತಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉದ್ಯಮಿ ನಾರಾಯಣನ್ ರಾಮಸ್ವಾಮಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಲಹೆಗಾರ ಕಾರ್ತಿಕ್ ಕಿಟ್ಟು ಮತ್ತು ವಿಟಿಯು ಕುಲಸಚಿವ ಆನಂದ್ ದೇಶಪಾಂಡೆ ಇದ್ದರು.
'ರೀತಿ'ಗೆ ಷರತ್ತುಗಳೇನು? :ಈ ಕಾಲೇಜುಗಳು ಅತ್ಯುತ್ಕೃಷ್ಟ ಮಟ್ಟವನ್ನು ಸಾಧಿಸಲು ಹಲವು ನಿಯಮಗಳನ್ನು ಪಾಲಿಸಲಾಗುವುದು.ಈ ನಿಯಮಗಳು ಹೀಗಿವೆ.
• ಕಾಲೇಜುಗಳು ಅಪೇಕ್ಷಿತ ಮಟ್ಟವನ್ನು ಮುಟ್ಟಲು ವಿಫಲವಾದಲ್ಲಿ ಮಧ್ಯದಲ್ಲೇ `ಸೂಪರ್-30’ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗುವುದು.
* ಮೂರು ವರ್ಷದಲ್ಲಿ NIRF ranking ಪಡೆಯಬೇಕು. ಐದು ವರ್ಷದೊಳಗೆ ವಿಶ್ವಮಟ್ಟದ ಸಂಸ್ಥೆಗಳಿಂದ ಮಾನ್ಯತೆ ಪಡೆಯಬೇಕು.
* ಯೋಜನೆಯ ಅವಧಿಯಾದ 5 ವರ್ಷಗಳ ಕೊನೆಯ ವೇಳೆಗೆ ಈ ಕಾಲೇಜುಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಪೈಕಿ ಶೇ.80ರಷ್ಟಕ್ಕಾದರೂ ಎನ್.ಬಿ.ಎ ಮಾನ್ಯತೆ ಹೊಂದಿರಬೇಕು.
• ಅಂತಿಮ ವರ್ಷದ ಬಿ.ಇ.ಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಪದವಿ ಪಡೆಯುವ ಹೊತ್ತಿಗೆ ಶೇ.50ರಷ್ಟು ವಿದ್ಯಾರ್ಥಿಗಳಾದರೂ ಉದ್ಯೋಗಾವಕಾಶ ಗಿಟ್ಟಿಸಿಕೊಂಡಿರಬೇಕು.
• ಆಯಾ ಕಾಲೇಜುಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಪ್ರತೀವರ್ಷವೂ ಗುಣಮಟ್ಟದ ಇಂಟರ್ನ್-ಶಿಪ್ ಅನ್ನು ಕಡ್ಡಾಯವಾಗಿ ಮಾಡಬೇಕು. 5 ವರ್ಷದಲ್ಲಿ ಶೆ.100 ರಷ್ಟು ಪ್ಲೇಸ್ ಮೆಂಟ್ ಸಿಗಬೇಕು.
• ಅಗತ್ಯವೆನಿಸಿದರೆ ವಿಟಿಯು ಕಡೆಯಿಂದ ಶಾಶ್ವತ ಮಾನ್ಯತೆ ಪಡೆದುಕೊಳ್ಳಬೇಕು.
* ಜಿಲ್ಲೆ ಅಭಿವೃದ್ಧಿಗೆ ಸಂಬಂದಿಸಿದಂತೆ ಕನಿಷ್ಠ 10 ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಕು.
* 25 ಉದ್ಯಮಿಗಳನ್ನು ಸೃಷ್ಟಿಸಬೇಕು.
ಆಯ್ಕೆಯಾಗಿರುವ ಸರ್ಕಾರಿ ಕಾಲೇಜುಗಳು : ಚಾಮರಾಜನಗರ, ಚಳ್ಳಕೆರೆ, ಹಾಸನ, ಹಾವೇರಿ, ಕುಶಾಲನಗರ, ತಲಕಾಡು, ಕೃಷ್ಣರಾಜಪೇಟೆ, ರಾಯಚೂರು, ರಾಮನಗರ, ಕಾರವಾರ, ಹೂವಿನಹಡಗಲಿಗಳಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ., ದಾವಣಗೆರೆಯಲ್ಲಿರುವ ಯೂನಿವರ್ಸಿಟಿ ಬಿಡಿಟಿ ಕಾಲೇಜು ಮತ್ತು ಕಲಬುರಗಿಯಲ್ಲಿರುವ ವಿಟಿಯು ಪಿಜಿ ಸೆಂಟರ್.
ಆಯ್ಕೆಯಾಗಿರುವ ಖಾಸಗಿ ಕಾಲೇಜುಗಳು :
(1)ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಬೆಳಗಾವಿ
(2) ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಗುಬ್ಬಿ (ತುಮಕೂರು ಜಿಲ್ಲೆ)
(3) ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜು, ಉಡುಪಿ
(4) ಜಿಎಸ್ಎಸ್ಎಸ್ ಮಹಿಳಾ ಇಂಜಿನಿಯರಿಂಗ್ & ಟೆಕ್ನಾಲಜಿ ಸಂಸ್ಥೆ, ಮೈಸೂರು.
(5) ಡಾ.ಟಿ ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಕೆಜಿಎಫ್ (ಕೋಲಾರ ಜಿಲ್ಲೆ)
(6) ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್ಸ್ಟಿಟ್ಯೂಟ್, ಮುಧೋಳ (ಬಾಗಲಕೋಟೆ ಜಿಲ್ಲೆ)
(7) ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ವಿಜಯಪುರ
(8) ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಚಿಕ್ಕಮಗಳೂರು
(9) ಎಸ್.ಜೆ.ಸಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ
(10) ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು, ಬಳ್ಳಾರಿ
(11) ಪಿಇಎಸ್ ತಾಂತ್ರಿಕ & ಮ್ಯಾನೇಜ್ಮೆಂಟ್ ಸಂಸ್ಥೆ, ಶಿವಮೊಗ್ಗ
(12) ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು, ಭಾಲ್ಕಿ (ಬೀದರ್ ಜಿಲ್ಲೆ)
(13) ತೋಂಟದಾರ್ಯ ಇಂಜಿನಿಯರಿಂಗ್ ಕಾಲೇಜು, ಗದಗ
(14) ವಿವೇಕಾನಂದ ಇಂಜಿನಿಯರಿಂಗ್ & ತಾಂತ್ರಿಕ ಕಾಲೇಜು, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ)
(15) ಜೈನ್ ಇಂಜಿನಿಯರಿಂಗ್ ಕಾಲೇಜು, ಹುಬ್ಬಳ್ಳಿ
(16) ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜು, ಶೋರಾಪುರ (ಯಾದಗಿರಿ ಜಿಲ್ಲೆ)
ಓದಿ :ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ತೀರ್ಮಾನ: ಉದ್ಘಾಟಕರ ಆಯ್ಕೆ ಸಿಎಂ ಹೆಗಲಿಗೆ