ಬೆಂಗಳೂರು: ಭಾರತದ ಗಡಿ ಎಲ್‌ಒಸಿಯಲ್ಲಿ 1948 ರ ನಂತರ ಇದೇ ಮೊದಲ ಬಾರಿಗೆ ಶಾರದಾ ದೇವಿಯ ಹಿಂದೂ ದೇವಾಲಯ ಪುನರುತ್ಥಾನ ಕೆಲಸ ಆರಂಭಿಸಲಾಗುತ್ತಿದೆ ಎಂದು ಸೇವ್ ಶಾರದ ಕಮಿಟಿಯ ಅಧ್ಯಕ್ಷ ಕಾಶ್ಮೀರದ ರವೀಂದ್ರ ಪಂಡಿತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಶಾರದಾ ದೇವಿಯ ಮೂಲ ಸ್ಥಾನ ಇದೆ. ಇಲ್ಲಿಗೆ ಆದಿ ಶಂಕರಾಚಾರ್ಯರು ಭೇಟಿ ನೀಡಿದ್ದರು. ಆದರೆ, ಈ ಕುರುಹುಗಳಿರುವ 10 ಜಿಲ್ಲೆಗಳನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಆ ಜಾಗದಲ್ಲಿ ಶಾರದ ವಿಶ್ವವಿದ್ಯಾಲಯವೂ ಇತ್ತು ಮತ್ತು ಅದು ನಳಂದ ವಿ.ವಿ.ಗಿಂತಲೂ ಪುರಾತನ ಶಿಕ್ಷಣ ಕೇಂದ್ರವಾಗಿದೆ. ಆದರೆ, ಮೇಲಿಂದ ಮೇಲೆ ಆಗಿರುವ ಆಕ್ರಮಣದಿಂದ ಇದು ಇಂದು ಯಾರಿಗೂ ತಿಳಿಯದಂತಹ ಸ್ಥಿತಿಗೆ ತಲುಪಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಳೆದ 20 ವರ್ಷಗಳ ಶ್ರಮದಿಂದ ಈಗ ಮತ್ತೆ ಆ ಪ್ರದೇಶದಲ್ಲಿ ಶಾರದ ಪೀಠ ಸ್ಥಾಪನೆಗೆ ಅವಕಾಶ ಸಿಕ್ಕಿದೆ. ಇದಕ್ಕೆ ಪಾಕಿಸ್ತಾನ ಸುಪ್ರೀಂಕೋರ್ಟ್ ಕೂಡ ಅನುಮತಿ ನೀಡಿದೆ. ಇನ್ನು ನೀಲಂ ಜಿಲ್ಲೆಯಲ್ಲಿ ಹಿಂದೂಗಳಿಲ್ಲದ ಕಾರಣ ಅಲ್ಲಿಯ ಮುಸ್ಲಿಂ ಜನರೂ ಈ ನವ ನಿರ್ಮಾಣಕ್ಕೆ ಕೈಜೋಡಿಸುತ್ತಿದ್ದಾರೆ ಎಂದು ವಿವರಿಸಿದರು.
ಎಲ್‌ಒಸಿಯಲ್ಲಿ ಶಾರದಾ ದೇವಿ ದೇವಾಲಯದ ಪುನರುತ್ಥಾನ ಕೆಲಸ ಆರಂಭ: ಪಾಕ್ನಿಂದಲೂ ಸಹಕಾರ! ಈಗಾಗಲೇ ಪಾಕ್ ಸುಪ್ರೀಂ ಕೋರ್ಟ್ ಶಾರದಾ ಪೀಠ ಹಿಂದೂಗಳ ಪವಿತ್ರ ಸ್ಥಾನ ಎಂದು ಘೋಷಣೆ ಮಾಡಿದೆ. ಪೀಠಕ್ಕೆ ವಾರ್ಷಿಕ ತೀರ್ಥಯಾತ್ರೆಯನ್ನು ಅನುಬಂಧದ ಮೂಲಕ Loc ಪರವಾನಗಿ ನಿಯಮಗಳಲ್ಲಿ ತಿದ್ದುಪಡಿ ತರಲು ನಾವು ಪಾಕಿಸ್ತಾನ ಸರ್ಕಾರದೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.
ಮಾಗಡಿ ಕ್ವಾರಿಯ ಕಲ್ಲುಗಳಿಂದ ಶಾರದಾ ಪೀಠ ನಿರ್ಮಾಣ:ಪಾಕ್ ಆಕ್ರಮಿತ ಶಾರದಾ ಪೀಠ ಪುನರ್ ಸ್ಥಾಪನೆಗಾಗಿ ಈಗಾಗಲೇ ಅಭೂತಪೂರ್ವವಾಗಿ ಕೆಲಸ ನಡೆಯುತ್ತಿದೆ. ಅಲ್ಲಿನ ಪಾಕಿಸ್ತಾನಿಗಳ ಸಹಕಾರ ಕೂಡ ಇರೋದರಿಂದ ಶಾರದಾ ಪೀಠದ ಕೆಲಸ ಯಾವುದೇ ತೊಂದರೆ ಇಲ್ಲದೆ ಜರುಗುತ್ತಿದೆ. ವಿಶೇಷವೆಂದರೆ ಶಾರದ ಪೀಠ ಮರುಸ್ಥಾಪನಾ ಕೆಲಸಕ್ಕಾಗಿ ರಾಜ್ಯದ ಮಾಗಡಿ ಬಳಿಯ ಕಲ್ಲು ಕ್ವಾರೆಯಿಂದ ಕೆತ್ತಿದ್ದ ಕಂಬಗಳನ್ನ ಸಾಗಿಸಲಾಗುತ್ತಿದೆ. ಬರೊಬ್ಬರಿ 3,500 ಕಿ.ಮೀ ದೂರವಿದ್ದು, 45 ದಿನಗಳ ಕಾಲ ಕಲ್ಲಿನ ಕಂಬಗಳನ್ನ ಸಾಗಿಸುವುದಕ್ಕೆ ಸಮಯವಕಾಶ ಬೇಕಾಗಲಿದೆ ಎಂದು ವಿವರಿಸಿದರು.
ಇದನ್ನೂ ಓದಿ: ಜಮ್ಮ& ಕಾಶ್ಮೀರ ಕುರಿತು ವರದಿ ಸಲ್ಲಿಸಿದ ಡಿಲಿಮಿಟೇಷನ್ ಆಯೋಗ: ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಲು ಸೂಚನೆ