ಬೆಂಗಳೂರು:ಅವಧಿ ಮೀರಿ ಪಾರ್ಟಿ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜೆಟ್ಲಾಗ್ ರೆಸ್ಟೋಬಾರ್‌ನಲ್ಲಿ ಮುಂದಿನ 25 ದಿನಗಳ ಕಾಲ ಮದ್ಯ ಸರಬರಾಜು ಮಾಡದಂತೆ, ಅರ್ಥಾತ್ ಪರವಾನಗಿ ಅಮಾನತುಗೊಳಿಸಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಎ. ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ಅಬಕಾರಿ ಕಾಯ್ದೆ-1965 ಕಲಂ 29ರ ಪ್ರಕಾರ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ತಕ್ಷಣದಿಂದಲೇ ಪರವಾನಗಿಯನ್ನು ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದೇ ತಿಂಗಳು 3ರಂದು ಮುಂಜಾನೆ 3 ಗಂಟೆವರೆಗೂ ಪಾರ್ಟಿ ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಮಣ್ಯನಗರ ಪೊಲೀಸರು ಅಬಕಾರಿ ನಿಯಮ ಉಲ್ಲಂಘನೆ ಬಗ್ಗೆಯೂ ಎಫ್ಐಆರ್ನಲ್ಲಿ ದಾಖಲಿಸಿದ್ದರು.
ಮೊದಲ ಬಾರಿಗೆ ನಿಯಮ ಉಲ್ಲಂಘನೆ ಕಂಡುಬಂದಿದ್ದರಿಂದ 25 ದಿನಗಳ ವರೆಗೆ ಲೈಸೆನ್ಸ್ ಅಮಾನತು ಮಾಡಲಾಗಿದೆ. ಮೂರು ಬಾರಿ ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ರದ್ದಾಗಲಿದೆ. ಸದ್ಯ ಮೊದಲ ಬಾರಿ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ 25 ದಿನಗಳ ಕಾಲ ಲೈಸೆನ್ಸ್ ಅಮಾನತು ಮಾಡಲಾಗಿದೆ.
ಪೊಲೀಸರಿಂದ ನಟರ ವಿಚಾರಣೆ:ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿ ಎಂಟು ಮಂದಿ ಪೊಲೀಸರು ನೀಡಿದ್ದ ನೊಟೀಸ್ಗೆ ಉತ್ತರಿಸಲು ಇತ್ತೀಚೆಗೆ ಸುಬ್ರಮಣ್ಯನಗರ ಠಾಣೆ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ನಟರಾದ ದರ್ಶನ್, ಡಾಲಿ ಧನಂಜಯ್, ನೀನಾಸಂ ಸತೀಶ್, ಚಿಕ್ಕಣ್ಣ, ಕಾಟೇರ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ನಿರ್ದೇಶಕ ತರುಣ್ ಸುಧೀರ್ ಅವರು ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಜನವರಿ 3ರಂದು ಜೆಟ್ಲಾಗ್ನಲ್ಲಿ ಏರ್ಪಡಿಸಲಾಗಿದ್ದ ಪಾರ್ಟಿ ಆರೋಪ ಸಂಬಂಧ ಪೊಲೀಸರು ವಿಚಾರಣೆ ನಡೆಸಿ, ಹೇಳಿಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ಅವಧಿ ಮೀರಿ ಪಾರ್ಟಿ: ತನಿಖಾ ವರದಿ ಕೇಳಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ