ಬೆಂಗಳೂರು: ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರೂ ಪತ್ರಕರ್ತರಾಗಿ ಪತ್ರಿಕಾ ವೃತ್ತಿಗೆ ಮಾದರಿ ರೂಪಿಸಿಕೊಟ್ಟಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ನೀಡುವುದೇ ಪತ್ರಿಕಾ ವೃತ್ತಿಯ ಉದ್ದೇಶ, ಆಶಯ ಮತ್ತು ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು:ಇವತ್ತಿನ ಬಹಳಷ್ಟು ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವುದು ನನ್ನ ಭಾವನೆ. ಪತ್ರಿಕಾ ವೃತ್ತಿಯ ಆಶಯಕ್ಕೆ ತಕ್ಕಂತೆ ಇದ್ದೇವಾ, ಇಲ್ಲವಾ ಎನ್ನುವ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ. ಸಮಾಜದಲ್ಲಿ ಇನ್ನೂ ಶೇ25 ರಷ್ಟು ಮಂದಿಗೆ ಶಿಕ್ಷಣ ಸಿಕ್ಕಿಲ್ಲ. ಆರ್ಥಿಕ ಅಸಮಾನತೆ ಇನ್ನೂ ಹೆಚ್ಚಾಗಿದೆ. ಹೀಗಾಗಿ ಅವಕಾಶ ವಂಚಿತರನ್ನು ಮುಖ್ಯವಾಹಿನಿಗೆ ತರುವ, ಸಮಾಜದ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದೇನೆ ಎಂದರು.
ಸಾಮಾಜಿಕ ಅಸಮಾನತೆ ಹಿಂದಿನಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಹೀಗಾಗಿ ಸಮಾಜದ ಬಹುಪಾಲು ಮಂದಿ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಮತ್ತು ತಾರತಮ್ಯಕ್ಕೆ ಬಲಿಯಾಗಿದ್ದಾರೆ. ಇದಕ್ಕಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಅನುಷ್ಠಾನಗೊಳ್ಳುವ ಹಿಂದಿನ ದಿನ ತಾವು ಮಾಡಿದ ಐತಿಹಾಸಿಕ ಭಾಷಣದಲ್ಲಿ, "ಆರ್ಥಿಕ-ಸಾಮಾಜಿಕ ಸ್ವಾತಂತ್ರ್ಯ ಸಿಗದೇ ಕೇವಲ ದೇಶಕ್ಕೆ ಆಡಳಿತಾತ್ಮಕ, ರಾಜಕೀಯ ಸ್ವಾತಂತ್ರ್ಯ ಸಿಕ್ಕರೆ ಅಸಮಾನತೆಗೆ ಬಲಿಯಾದ ಜನ ಮುಂದೊಂದು ದಿನ ಈ ಸ್ವಾತಂತ್ರ್ಯ ಸೌಧವನ್ನು ಧ್ವಂಸ ಮಾಡಿಬಿಡಬಹುದು ಎಂದಿದ್ದರು ಎಂದು ನೆನಪಿಸಿಕೊಂಡರು.
ದುಡಿಯುವ ವರ್ಗಗಳು ಹಸಿವಿನಿಂದ ಮಲಗಿದರೂ ಪರ್ವಾಗಿಲ್ಲ, ಅನ್ನಭಾಗ್ಯ ಮಾತ್ರ ಜಾರಿ ಮಾಡಬಾರದು ಎನ್ನುವ ಹೊಟ್ಟೆ ತುಂಬಿದವರ ಮನಸ್ಥಿತಿ ಸಮಾಜ ವಿರೋಧಿಯಾದದ್ದು. ಜನರ ಜೇಬಿನಲ್ಲಿ ಹಣ ಇದ್ದರೆ ಮಾತ್ರ ದೇಶದ ಆರ್ಥಿಕತೆ ಬೆಳವಣಿಗೆ ಕಾಣುತ್ತದೆ. ಈ ಕಾರಣಕ್ಕೇ ನಮ್ಮ ಸರ್ಕಾರ ದುಡಿಯುವ ಜನರ ಜೇಬಿನಲ್ಲಿ ಹಣ ಇಡುವ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಇದನ್ನು ವಿರೋಧಿಸುವ ಬಿಜೆಪಿಯವರ ಮನಸ್ಥಿತಿ ಸಮಾಜ ವಿರೋಧಿಯಾದದ್ದು. ಹೀಗಾಗಿ ಪತ್ರಿಕಾ ವೃತ್ತಿಯಲ್ಲಿರುವವರು ಬಡವರ ಪರವಾದ, ಜನರ ಪರವಾದ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.