ಬೆಂಗಳೂರು: ಇಂದಿನಿಂದ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ 'ಶಕ್ತಿ ಯೋಜನೆ'ಗೆ ರಾಜ್ಯದ ನಾರಿಯರು ಹರ್ಷ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಮೊದಲ ಹೆಜ್ಜೆ ಎನ್ನುವ ಘೋಷ ವಾಕ್ಯದೊಂದಿಗೆ ಎಲ್ಲ ರಸ್ತೆ ಸಾರಿಗೆ ನಿಗಮಗಳ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ.
ಈಟಿವಿ ಭಾರತದ ಜೊತೆ ಮಾತನಾಡಿದ ಮಹಿಳಾ ಪ್ರಯಾಣಿಕರಾದ ಪವಿತ್ರ, "ಯೋಜನೆ ಬಡವರಿಗೆ ತುಂಬಾ ಅನುಕೂಲವಾಗಿದೆ. ಕೂಲಿಕಾರರು ದಿನವಿಡೀ ದುಡಿದು ಅಲ್ಪ ಹಣ ಸಂಪಾದನೆ ಮಾಡುತ್ತಾರೆ. ದಿನ ಬೆಳಗಾದರೆ ಬಸ್ ಪ್ರಯಾಣಕ್ಕೆ ಹಣ ಖರ್ಚು ಮಾಡಬೇಕು. ಅದೇ ನೂರು ರೂಪಾಯಿ ಹಣ ಉಳಿದರೆ ಮಕ್ಕಳನ್ನು ಸಾಕಲು, ಸಂಸಾರ ಸಾಗಿಸಲು ಅನುಕೂಲವಾಗಲಿದೆ" ಎಂದರು.
"ಬಡವರು ಸರ್ಕಾರದ ಶಕ್ತಿ ಯೋಜನೆಯನ್ನು ಬಳಸಿಕೊಳ್ಳಬೇಕು. ಬಸ್ನಲ್ಲಿ ಸಂಚರಿಸುವವರೆಲ್ಲ ಬಡ ಮಧ್ಯಮ ವರ್ಗದವರು, ಕಾರ್ಮಿಕರು. ಉಳ್ಳವರು ಆಟೋ, ಟ್ಯಾಕ್ಸಿಗಳಲ್ಲಿ ಓಡಾಡುತ್ತಾರೆ. ಹಾಗಾಗಿ ನಮ್ಮಂತಹ ಕಾರ್ಮಿಕರು, ಬಡವರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಾವು ರಜೆಗಳಲ್ಲಿ ಮಾತ್ರ ನಮ್ಮ ಊರಿಗೆ ಹೋಗುತ್ತೇವೆ. ಎಲ್ಲ ಬಡ ಕುಟುಂಬ ಇಲ್ಲೇ ಕೂಲಿ ಮಾಡಿ ಇಲ್ಲೇ ಬದುಕುತ್ತಾರೆ, ಹಾಗಾಗಿ ಅವರೆಲ್ಲ ಕೂಲಿಗೆ ಹೋಗುವಾಗಲೂ ಉಚಿತವಾಗಿ ಹೋಗಬಹುದು. ಊರಿಗೆ ಹೋಗುವಾಗಲೂ ಉಚಿತವಾಗಿ ಹೋಗಬಹುದಾಗಿದೆ. ಹಾಗಾಗಿ ಈ ಶಕ್ತಿ ಯೋಜನೆ ನಮಗೆ ಖುಷಿ ತಂದಿದೆ, ಮುಂದೆ ಏನಾಗುತ್ತದೋ ನೋಡೋಣ" ಎಂದು ಹೇಳಿದರು.
ಮತ್ತೋರ್ವ ಮಹಿಳಾ ಪ್ರಯಾಣಿಕರಾದ ಜ್ಯೋತಿ ಮಾತನಾಡಿ, "ಶಕ್ತಿ ಯೋಜನೆ ಉತ್ತಮವಾಗಿದೆ. ಎಲ್ಲರಿಗೂ ಉಚಿತ ಎಂದರೆ ಒಳ್ಳೆಯದೇ. ಈ ಯೋಜನೆಯಿಂದ ವಿದ್ಯಾರ್ಥಿನಿಯರಾದ ನಾವು ಪಾಸ್ಗಾಗಿ ಸರದಿಯಾಗಿ ನಿಂತು ಕಾಯಬೇಕಿಲ್ಲ. ನಮ್ಮ ಶಾಲೆ, ಮನೆ ಮಾರ್ಗದ ಹೊರತುಪಡಿಸಿಯೂ ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಪ್ರಯಾಣಿಸಬಹುದು, ಈ ಯೋಜನೆ ಉಪಯುಕ್ತವಾಗಿದೆ. ಎಲ್ಲ ರೀತಿಯಲ್ಲೂ ಯೋಜನೆ ಅನುಕೂಲಕರವಾಗಿದೆ" ಎಂದು ತಿಳಿಸಿದರು.