ಕರ್ನಾಟಕ

karnataka

ETV Bharat / state

ಆರ್ಥಿಕವಾಗಿ ದುರ್ಬಲರಾಗಿರುವವರ ಕಷ್ಟಗಳಿಗೆ ಸ್ಪಂದಿಸಿ: ಸರ್ಕಾರಕ್ಕೆ ಕುಮಾರಸ್ವಾಮಿ ಒತ್ತಾಯ - H.D kumarswamy latest tweet

ಕೊರೊನಾ ವೈರಸ್​ ನಿರ್ಬಂಧದಿಂದಾಗಿ ದಿನಗೂಲಿ ನೌಕರರು ಹೆಚ್ಚು ಸಮಸ್ಯೆಗೆ ಸಿಲುಕಿದ್ದು, ಸರ್ಕಾರ ಆರ್ಥಿಕವಾಗಿ ದುರ್ಬಲರಾಗಿರುವವರ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಟ್ವೀಟ್​​ ಮಾಡಿದ್ದಾರೆ.

H.D kumarswamy
ಹೆಚ್ .ಡಿ.ಕುಮಾರಸ್ವಾಮಿ

By

Published : Mar 20, 2020, 10:22 PM IST

ಬೆಂಗಳೂರು:ಕೊರೊನಾ ವೈರಸ್‌ನಿಂದ ಎದುರಾದ ನಿರ್ಬಂಧಗಳಿಂದಾಗಿ ದಿನಕೂಲಿ ನೌಕರರು, ಬೀದಿಬದಿ ವ್ಯಾಪಾರಿಗಳು ಹೆಚ್ಚು ಸಮಸ್ಯೆಗೆ ಸಿಲುಕಿದ್ದು, ಅವರ ಎರಡು ತಿಂಗಳ ಬದುಕಿಗೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಆಟೋ, ಕ್ಯಾಬ್ ಚಾಲಕರ ಬ್ಯಾಂಕ್ ಸಾಲದ ಕಂತು ಪಾವತಿಗೂ ಎರಡು ತಿಂಗಳ ವಿನಾಯ್ತಿ ಕಲ್ಪಿಸಬೇಕು. ಈ ಮೂಲಕ ಸರ್ಕಾರ ಬಡವರ ಪರ ನಿಲುವು ತಾಳಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಆರೋಗ್ಯ ಸೇವೆಗೆ ಹೆಚ್ಚಿನ ಹಣ ಬೇಕಾಗಿದ್ದು, ಬ್ಯಾಂಕ್ ಸಾಲಗಳ ಕಂತು ಪಾವತಿ ಮುಂದೂಡಬೇಕು. ಬಡ್ಡಿ ಮನ್ನಾ, ಮಾಸಾಶನ ಮತ್ತಿತರ ಪರಿಹಾರ ಘೋಷಣೆ ಮಾಡುವ ನಿರ್ಧಾರಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಆರ್ಥಿಕವಾಗಿ ದುರ್ಬಲರಾಗಿರುವವರ ನೆರವಿಗೆ ಸ್ಪಂದಿಸುವ ಮೂಲಕ ಆರ್ಥಿಕತೆಗೆ ಚೈತನ್ಯ ತುಂಬಬೇಕು. ಕೊರೊನಾ ವೈರಸ್ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಸಲಹೆ ನೀಡಿದ್ದಾರೆ.

ಕೊರೊನಾದಿಂದ ಹದಗೆಟ್ಟಿರುವ ಆರ್ಥಿಕತೆಗೆ ಚೈತನ್ಯ ನೀಡಲು ಕೇರಳ ಸರ್ಕಾರ ಅಲ್ಲಿನ ಜನರಿಗೆ 20 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿದೆ. ಅದರಲ್ಲಿ ಆರೋಗ್ಯ ಸೇವೆ, ಉಚಿತ ದಿನಸಿ, ಸಾಲಕ್ಕೆ ನೆರವು, ಮಾಶಾಸನ, ಕಡಿಮೆ ದರದಲ್ಲಿ ಊಟ, ಬಾಕಿ ಮರುಪಾವತಿ ಮೊದಲಾದವುಗಳು ಸೇರಿವೆ. ಕೇರಳದ ಈ ಕ್ರಮ ನಮಗೇಕೆ ಮಾದರಿಯಾಗಬಾರದು ಎಂದು ಪ್ರಶ್ನಿಸಿದ್ದಾರೆ.

ಕೇರಳದಲ್ಲಿ 26 ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದರೆ, ಕರ್ನಾಟಕ ದಲ್ಲಿ 15 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಮಹಾಮಾರಿಯ ಬಗೆಗಿನ ಭೀತಿ ಕೇರಳಕ್ಕಿಂತ ಭಿನ್ನವೇನಿಲ್ಲ. ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡುತ್ತಿದ್ದು, ಬಡ ವರ್ಗದವರ ಮೇಲೆ ನೇರ ಪರಿಣಾಮ ಬೀರುತ್ತಿರುವುದರಿಂದ ರಾಜ್ಯ ಸರ್ಕಾರ ಕೇರಳ ಮಾದರಿಯಂತೆ ನೆರವಿಗೆ ಬರಲು ಆಗ್ರಹಿಸಿದ್ದಾರೆ.

ABOUT THE AUTHOR

...view details