ಬೆಂಗಳೂರು:ಮೀಸಲಾತಿ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಷಡ್ಯಂತ್ರ ಸುಪ್ರೀಂ ಕೋರ್ಟ್‌ನಲ್ಲಿ ಬಹಿರಂಗವಾಗಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ತಿಳಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿಂದು ವಕ್ತಾರ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಹೆಚ್ಚಳದ ವಿಚಾರವಾಗಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ಗೆ ರಾಜ್ಯ ಬಿಜೆಪಿ ಸರ್ಕಾರ ತನ್ನ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಅಫಿಡವಿಟ್ ಸಲ್ಲಿಸುವವರೆಗೂ ಸರ್ಕಾರದ ಆದೇಶ ಜಾರಿಗೆ ಬರಲು ಸಾಧ್ಯವೇ ಇಲ್ಲ. ಆ ಮೂಲಕ ಬಿಜೆಪಿ ಸರ್ಕಾರ ಮೀಸಲಾತಿ ಹೆಸರಿನಲ್ಲಿ ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರಿಗೆ ಮಾಡಿದ ಮೋಸ ಮತ್ತೊಮ್ಮೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಬಯಲಾಗಿದೆ ಎಂದು ಹೇಳಿದರು.
ಬೊಮ್ಮಾಯಿ ಅವರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ನೂತನ ಮೀಸಲಾತಿ ಆಧಾರದ ಮೇಲೆ ಯಾವುದೇ ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಯಾವುದೇ ತಯಾರಿ, ಯೋಜನೆ ಇಲ್ಲದೇ ಕೇವಲ ರಾಜ್ಯದ 6.50 ಕೋಟಿ ಕನ್ನಡಿಗರಿಗೆ ದ್ರೋಹ ಬಗೆಯಲು ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಆದೇಶ ನೀಡಿತ್ತು ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ನಾವು ಆರಂಭದಿಂದಲೂ ಹೇಳುತ್ತಿದ್ದಂತೆ, ಬೊಮ್ಮಾಯಿ ಅವರ ಸರ್ಕಾರದ ಮೀಸಲಾತಿ ಹೆಚ್ಚಳದ ವಿಚಾರವು ಎಲ್ಲ ಸಮುದಾಯಗಳಿಗೆ ನಂಬಿಕೆ ದ್ರೋಹ ಬಗೆಯುವ ಷಡ್ಯಂತ್ರವಾಗಿತ್ತು. ಮೀಸಲಾತಿ ಹೆಚ್ಚಳದ ಆದೇಶ ಹೊರಡಿಸಿರುವ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಈ ಆದೇಶಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಇದೆಲ್ಲದರ ಪರಿಣಾಮ ಸರ್ಕಾರದ ಪಿತೂರಿ ಸುಪ್ರೀಂ ಕೋರ್ಟ್ ನಲ್ಲಿ ಬಹಿರಂಗವಾಗಿದೆ. ಕಳೆದ 90 ದಿನಗಳಲ್ಲಿ ಈ ಸರ್ಕಾರ ಮೀಸಲಾತಿ ವರ್ಗೀಕರಣವನ್ನು 3 ಬಾರಿ ಬದಲಿಸಿತ್ತು. ಇದು ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ. ಸಮಾಜಗಳನ್ನು ಒಡೆದು, ಅವರಲ್ಲಿ ದ್ವೇಷ ಬಿತ್ತುವ ಬೊಮ್ಮಾಯಿ ಸರ್ಕಾರದ ಷಡ್ಯಂತ್ರ ಸ್ಪಷ್ಟವಾಗಿದೆ ಎಂದು ಅಪಾದಿಸಿದರು.
ಜನಸಂಖ್ಯೆ ಆಧಾರಿತ ಮೀಸಲಾತಿ ನೀಡಬೇಕು: ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ. ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.3ರಿಂದ ಶೇ.4ಕ್ಕೆ ಏರಿಕೆ ಮಾಡಿದ ಪರಿಣಾಮ ಮೀಸಲಾತಿ ಪ್ರಮಾಣ ಶೇ.50ರ ಮಿತಿಯನ್ನು ದಾಟಿದೆ. ಈ ವಿಚಾರವನ್ನು ನಾವು ಆರಂಭದಿಂದಲೂ ಹೇಳುತ್ತಿದ್ದು, ಈ ಸಮುದಾಯಗಳಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಕೋಲಾರದ ಜೈ ಭಾರತ ಸಮಾವೇಶದಲ್ಲಿ ಆಗ್ರಹಿಸಿದ್ದಾರೆ ಎಂದರು.