ಬೆಂಗಳೂರು : ನೂತನ ಸಂಸತ್ ಭವನದಲ್ಲಿ ನಡೆಯುವ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಕಲ್ಪಿಸುವ ವಿಧೇಯಕ ಮಂಡನೆಯಾಗಿರುವುದು ಶ್ಲಾಘನೀಯ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ಮಹಿಳಾ ಮೀಸಲಾತಿ ವಿಧೇಯಕವನ್ನು ಲೋಕಸಭೆಯಲ್ಲಿ ಮರು ಮಂಡಿಸಲು ಪರಿಗಣಿಸುವಂತೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿದ್ದ ಪತ್ರವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ 1996ರಲ್ಲೇ ಮಹಿಳಾ ಮೀಸಲು ವಿಧೇಯಕ ಮಂಡನೆ ಮಾಡುವುದಕ್ಕೆ ಪ್ರಸ್ತಾಪಿಸಿದ್ದನ್ನು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯನ್ನು ಘೋಷಿಸಿ ರಾಜ್ಯದಲ್ಲಿ ಅರ್ಹ ಮಹಿಳಾ ಮತದಾರರ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಒಟ್ಟು ಮತದಾರರಲ್ಲಿ ಸುಮಾರು ಶೇ. 50ರಷ್ಟು ಮಹಿಳಾ ಮತದಾರರಿದ್ದರೆ ಆಶ್ಚರ್ಯವೇನಿಲ್ಲ. ಭಾರತದ ಇತರ ರಾಜ್ಯಗಳಲ್ಲಿನ ಅಂಕಿ-ಅಂಶಗಳು ಇದಕ್ಕಿಂತ ಭಿನ್ನವಾಗಿಲ್ಲ. ಇದು ಶಾಸಕಾಂಗ ಸಭೆಗಳು ಮತ್ತು ಸಂಸತ್ತಿನಲ್ಲಿ ಮಹಿಳೆಯರಿಗೆ ಮೀಸಲಾತಿಯ ಕಲ್ಪನೆಯನ್ನು ಮರು ಪರಿಶೀಲಿಸುವಂತೆ ಮಾಡಿದೆ ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿತ್ತು.
ನಾನು 1996ರಲ್ಲಿ ಪ್ರಧಾನ ಮಂತ್ರಿಯಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತಿಗೆ ತಂದಿದ್ದರೂ ವಿಧೇಯಕ ಅಂಗೀಕಾರ ಪಡೆಯಲು ಯಶಸ್ವಿಯಾಗಿರಲಿಲ್ಲ. ನಾನು 1995ರಲ್ಲಿ ಪ್ರಧಾನ ಮಂತ್ರಿ ಪಿ ವಿ ನರಸಿಂಹರಾವ್ ಅವರಿಗೆ ಮುಖ್ಯಮಂತ್ರಿಯಾಗಿಯೂ ಮಹಿಳಾ ಮೀಸಲಾತಿಗೆ ಒತ್ತಾಯಿಸಿದ್ದೆ. ನಂತರ 2008ರಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಮಾಡಿದ ಪ್ರಯತ್ನಗಳು ಸಫಲವಾಗಲಿಲ್ಲ ಎಂದಿದ್ದಾರೆ.