ಬೆಂಗಳೂರು:ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಲು ಎರಡು ವಾರಗಳ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮನವಿ ಮಾಡಿದೆ.
ತೃತೀಯ ಲಿಂಗಿಗಳಿಗೆ ಪೊಲೀಸ್ ಪಡೆಗಳ ನೇಮಕಾತಿಯಲ್ಲಿ ಮೀಸಲು ನೀಡದ ಕ್ರಮ ಪ್ರಶ್ನಿಸಿ ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಹೆಸರಿನ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದಿಸಿ, ತೃತೀಯ ಲಿಂಗಿಗಳಿಗೆ ಮೀಸಲು ಕಲ್ಪಿಸುವ ವಿಚಾರ ರಾಜ್ಯ ಸರ್ಕಾರದ ನೀತಿ ನಿರ್ಣಯದ ವಿಷಯವಾಗಿದೆ. ರಾಜ್ಯದಲ್ಲಿ ತೃತೀಯ ಲಿಂಗಿಗಳು ಎಷ್ಟಿದ್ದಾರೆ ಎಂಬುದನ್ನು ಪರಿಗಣಿಸಿಯೇ, ಮೀಸಲು ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಅದೇ ರೀತಿ 2014ರ ಸುಪ್ರೀಂಕೋರ್ಟ್ ತೀರ್ಪು, ರಾಜ್ಯ ಸರ್ಕಾರದ ಟ್ರಾನ್ಸ್ಜೆಂಡರ್ ನೀತಿ- 2017 ಮತ್ತು ಕೇಂದ್ರ ಸರ್ಕಾರದ ತೃತೀಯಲಿಂಗಿ ವ್ಯಕ್ತಿಗಳ ಹಕ್ಕು ರಕ್ಷಣೆ ಕಾಯ್ದೆ-2019ನನ್ನು ಪರಾಮರ್ಶಿಸಿ ಯೋಜನೆ ರೂಪಿಸಬೇಕು. ಆದ್ದರಿಂದ ಅರ್ಜಿ ಕೋರಿಕೆ ಪರಿಗಣಿಸುವ ಕುರಿತು ವಿವರವಾಗಿ ತಿಳಿಸಲು ಎರಡು ವಾರಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ರಾಜ್ಯ ಸರ್ಕಾರ ವಿಶೇಷ ಮೀಸಲು ಪೊಲೀಸ್ ಪಡೆಗಳಲ್ಲಿ ಖಾಲಿ ಇರುವ 2672 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸಂಗಮ ಸ್ವಯಂಸೇವಾ ಸಂಸ್ಥೆ, ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಿಲ್ಲ. ಇದು ಸುಪ್ರೀಂಕೋರ್ಟ್ ನಿರ್ದೇಶನಗಳ ಉಲ್ಲಂಘನೆ ಹಾಗೂ ತೃತೀಯ ಲಿಂಗಿಗಳನ್ನು ನಿರ್ಲಕ್ಷಿಸುವ ಕ್ರಮ. ಆದ್ದರಿಂದ ತೃತೀಯ ಲಿಂಗಿಗಳಿಗೆ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಲು ಮತ್ತು ಮೀಸಲು ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ.