ಬೆಂಗಳೂರು : ಪಂಚಮಸಾಲಿ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಪ್ರತಿಯನ್ನು ಹೈಕೋರ್ಟ್ ಸೋಮವಾರ ಪರಿಶೀಲನೆ ನಡೆಸಿತು. ಅಲ್ಲದೆ, ಕನ್ನಡ ಭಾಷೆಯಲ್ಲಿರುವ ವರದಿಯನ್ನು ಸರ್ಕಾರ ಮತ್ತು ಅರ್ಜಿದಾರರರಿಗೆ ನೀಡಲು ನ್ಯಾಯಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿತು. ಆಂಗ್ಲಭಾಷೆಗೆ ತರ್ಜುಮೆ ಮಾಡಿ ಸಲ್ಲಿಸಲು ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
ಪಂಚಮಸಾಲಿ ಉಪ ಪಂಗಡಕ್ಕೆ ಮೀಸಲಾತಿ ನೀಡುವ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿದ್ದ ಮಧ್ಯಂತರ ವರದಿ ಕಾನೂನು ಬಾಹಿರ ಎಂದು ಘೊಷಣೆ ಮಾಡಲು ಕೋರಿ ಬೆಂಗಳೂರಿನ ಡಿ. ಜಿ ರಾಘವೇಂದ್ರ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು. ರಾಜ್ಯ ಸರ್ಕಾರ 2ಬಿ ರಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ಮೀಸಲು ರದ್ದು ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣಾ ಹಂತದಲ್ಲಿದೆ. ಈ ಅರ್ಜಿ ವಿಚಾರಣೆ ತೀರ್ಮಾನ ಪರಿಗಣಿಸಿ ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ವಿಚಾರಣೆಯನ್ನು ಜುಲೈ 20 ಕ್ಕೆ ಮುಂದೂಡಿತು.
ಇದನ್ನೂ ಓದಿ:ಸೇವೆಯಿಂದ ವಜಾಗೊಂಡ ನೌಕರ ಮರು ನೇಮಕವಾದಲ್ಲಿ ಗಳಿಕೆ ರಜೆಗೆ ಅರ್ಹ: ಹೈಕೋರ್ಟ್
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ಸರ್ಕಾರ ಸಲ್ಲಿಸಿರುವ ಮಧ್ಯಂತರ ವರದಿ ಲಭ್ಯವಾಗಿಲ್ಲ. ಈ ಸಂಬಂಧ ಮಾಹಿತಿ ಹಕ್ಕು ಕಾಯಿದೆ ಅಡಿ ಕೇಳಲಾಗಿದೆ. ಈ ವರೆಗೂ ವರದಿ ಲಭ್ಯವಾಗಿಲ್ಲ. ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿ ಮುಂದಿನ ವಾದ ಮಂಡಿಸಬೇಕಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮುಚ್ಚಿದ ಲಕೋಟೆಯಲ್ಲಿದ್ದ ವರದಿಯನ್ನು ತೆಗೆಯುವುದಕ್ಕೆ ನ್ಯಾಯಾಲಯದ ಅಧಿಕಾರಿಗೆ ಸೂಚನೆ ನೀಡಿತು.