ಬೆಂಗಳೂರು: ರಾಷ್ಟ್ರೀಯ ಕಾನೂನು ಶಾಲೆ ಎಂದು ಕರೆಯಲ್ಪಡುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು ಎಂಬ ಬೇಡಿಕೆಗೆ ಅಧಿಕೃತ ಮುದ್ರೆ ಬಿದ್ದಿದ್ದು, ಕನ್ನಡಿಗರಿಗೆ ಶೇ.25ರಷ್ಟು ಮೀಸಲಾತಿ ಕಲ್ಪಿಸುವ ದಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಅಧಿನಿಯಮ-2020 ಇದಕ್ಕೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿದೆ.
ರಾಷ್ಟ್ರೀಯ ಕಾನೂನು ವಿವಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಧಾನಸಭೆಯ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದ ತಿದ್ದುಪಡಿ ಅಧಿನಿಯಮಕ್ಕೆ ಏ.27 ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದು, ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರದಲ್ಲಿ ತಿದ್ದುಪಡಿ ಅಧಿನಿಯಮವನ್ನು ಪ್ರಕಟಿಸಿದೆ. ತಿದ್ದುಪಡಿ ಅಧಿನಿಯಮದಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ಮೀಸಲಿರಿಸಬೇಕಾಗಿದೆ.
ಕರ್ನಾಟಕದ ವಿದ್ಯಾರ್ಥಿ ಎಂದರೆ ಅರ್ಹತಾ ಪರೀಕ್ಷೆಗೆ ಹಿಂದಿನ 10 ವರ್ಷಗಳಿಗೆ ಕಡಿಮೆಯಿಲ್ಲದ ಅವಧಿಗಾಗಿ ರಾಜ್ಯದಲ್ಲಿನ ಯಾವುದಾದರೂ ಒಂದು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಒಬ್ಬ ವಿದ್ಯಾರ್ಥಿ ಎಂದು ವಿವರಿಸಲಾಗಿದೆ. ಈ ಅರ್ಹತೆ ಹೊಂದಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಶೇ. 25ರಷ್ಟು ಮೀಸಲಾತಿ ಸಿಗಲಿದೆ.
ಕನ್ನಡಿಗರಿಗೆ ಶೇ.25 ರಷ್ಟು ಮೀಸಲಾತಿ ಕಲ್ಪಿಸುವ ದಿ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ತಿದ್ದುಪಡಿ) ಅಧಿನಿಯಮ-2020 ಕ್ಕೆ ರಾಜ್ಯಪಾಲರ ಒಪ್ಪಿಗೆ ಸಿಕ್ಕಿರುವುದಕ್ಕೆ ರಾಷ್ಟ್ರೀಯ ಕಾನೂನು ವಿವಿ ಶೈಕ್ಷಣಿಕ ಸಮಿತಿ ಸದಸ್ಯರಾಗಿರುವ ಹೈಕೋರ್ಟ್ನ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಬಹುತೇಕ ಹೊರ ರಾಜ್ಯಗಳ ವಿದ್ಯಾರ್ಥಿಗಳೇ ತುಂಬಿರುತ್ತಿದ್ದ ಈ ಪ್ರತಿಷ್ಠಿತ ವಿವಿಯಲ್ಲಿ ಕನ್ನಡಿಗರಿಗೆ ಮೀಸಲು ಸಿಗುವಲ್ಲಿ ಇವರು ಸಾಕಷ್ಟು ಶ್ರಮಿಸಿದ್ದರು.