ಬೆಂಗಳೂರು: ಯೋಜನೆಗಳ ತ್ರೈಮಾಸಿಕ ವರದಿ ನೀಡದ ಬಿಲ್ಡರ್ ಗಳಿಗೆ ಕರ್ನಾಟಕ ರೇರಾ ಪ್ರಾಧಿಕಾರ ದಂಡ ಪ್ರಯೋಗ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ.
ಗ್ರಾಹಕರ ಹಿತದೃಷ್ಟಿಯಿಂದ ರೇರಾ ಕಾಯ್ದೆ ಮತ್ತು ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನೆಯ ಪ್ರಗತಿ ವಿವರ ಮತ್ತು ಲೆಕ್ಕಪತ್ರಗಳ ಪರಿಶೀಲನೆಗೆ ಅಭಿವೃದ್ಧಿದಾರರು ತಮ್ಮ ತ್ರೈಮಾಸಿಕ ಪ್ರಗತಿ ವರದಿ ಸಲ್ಲಿಸಬೇಕು. ಆದರೆ, ತಮ್ಮ ತ್ರೈಮಾಸಿಕ ಪ್ರಗತಿ ವರದಿಯನ್ನು ಸಲ್ಲಿಸದೇ ಇರುವ ಅಭಿವೃದ್ಧಿದಾರರಿಗೆ ಕಾಯ್ದೆ 7 (1) ರಡಿ ಅಭಿವೃದ್ಧಿದಾರರುಗಳ ನೋಂದಣಿ ಸಂಖ್ಯೆಯನ್ನು ರದ್ದುಮಾಡುವ ಮತ್ತು ಕಲಂ 63ರಡಿ ಯೋಜನಾ ವೆಚ್ಚದ ಶೇ.5 ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಕರ್ನಾಟಕ ರೇರಾ ಪ್ರಾಧಿಕಾರ ನಿಯಮ ಉಲ್ಲಂಘಿಸಿದ ಬಿಲ್ಡರ್ ಗಳಿಗೆ ದಂಡ ಪ್ರಯೋಗ ಮಾಡಿದೆ.
ರೇರಾ ಪ್ರಾಧಿಕಾರ ತಮ್ಮ ಯೋಜನೆಗಳ ತ್ರೈಮಾಸಿಕ ಪ್ರಗತಿ ವಿವರಗಳನ್ನು ಸಲ್ಲಿಸುವಂತೆ ಆಗಸ್ಟ್ 1, 2020, ಆಗಸ್ಟ್ 29 ಹಾಗೂ ಅಂತಿಮವಾಗಿ ಸೆ.17ರಂದು ನೋಟಿಸ್ ಜಾರಿ ಮಾಡಿತ್ತು. ರೇರಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡು ತ್ರೈಮಾಸಿಕ ಪ್ರಗತಿ ವಿವರ ಮತ್ತು ವಾರ್ಷಿಕ ವರದಿ ಸಲ್ಲಿಸದಿರುವ 1437 ಅಭಿವೃದ್ಧಿದಾರರು ತಮ್ಮ ಯೋಜನೆಯ ತ್ರೈಮಾಸಿಕ ಪ್ರಗತಿ ವರದಿಯನ್ನು ಡಿಸೆಂಬರ್ 30ರೊಳಗಾಗಿ ಸಲ್ಲಿಸಬೇಕಾಗಿತ್ತು.
ನಿಯಮ ಉಲ್ಲಂಘಿಸಿದವರಿಗೆ ದಂಡ ಪ್ರಯೋಗ : ಡಿಸೆಂಬರ್ 30ರೊಳಗೆ ತ್ರೈಮಾಸಿಕ ವರದಿ ನೀಡದ ಬಿಲ್ಡರ್ ಗಳಿಗೆ ರೇರಾ ಪ್ರಾಧಿಕಾರ 50,000 ರೂ. ದಂಡ ವಿಧಿಸಿದೆ. ಸುಮಾರು 1,300 ಅಭಿವೃದ್ಧಿದಾರರು, ಬಿಲ್ಡರ್ಗಳಿಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 4,000 ಯೋಜನೆಗಳ ಪೈಕಿ, ತ್ರೈಮಾಸಿಕ ವರದಿ ಸಲ್ಲಿಸದ 1300 ಬಿಲ್ಡರ್ಗಳಿಗೆ ದಂಡ ವಿಧಿಸಲಾಗಿದೆ. 2019 ಸಾಲಿಗೆ ಸಂಬಂಧಪಟ್ಟಂತೆ ತ್ರೈಮಾಸಿಕ ವರದಿ ಸಲ್ಲಿಸದ ಬಿಲ್ಡರ್ಗಳಿಗೆ ಈ ದಂಡವನ್ನು ವಿಧಿಸಲಾಗಿದೆ.