ಬೆಂಗಳೂರು:ಬಿಡಿಎ ಜಾಗದಲ್ಲಿರುವ ಮನೆಗಳ ಸಕ್ರಮಗೊಳಿಸುವ ಶುಲ್ಕವನ್ನು ಇಳಿಕೆ ಮಾಡಬೇಕೆಂದು ಹೆಬ್ಬಾಳ ಶಾಸಕ ಭೈರತಿ ಸುರೇಶ್ ನೇತೃತ್ವದಲ್ಲಿ ಕಂದಾಯ ನಿವೇಶನ ಮತ್ತು ಕಟ್ಟಡ ಮಾಲೀಕರ ಸಮಿತಿ ಸದಸ್ಯರು, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಕಂದಾಯ ನಿವೇಶನಗಳನ್ನು ಮರುಹಂಚಿಕೆ ಮಾಡಲು ವಿಧಿಸಲಾಗುತ್ತಿರುವ ಶುಲ್ಕ ದುಬಾರಿಯಾಗಿದ್ದು, ಕೆಲವು ಪ್ರಕರಣಗಳಲ್ಲಿ ನಿವೇಶನದ ದರಕ್ಕಿಂತ ದುಪ್ಪಟ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ. ಇದು ನಾಗರಿಕರಿಗೆ ಹೊರೆ ಆಗುತ್ತಿರುವುದರಿಂದ ಶುಲ್ಕವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಈ ವೇಳೆ ಮಾತನಾಡಿದ ವಿಶ್ವನಾಥ್, ಬಿಡಿಎಗೆ ಸೇರಿದ ಜಾಗದಲ್ಲಿ 75 ಸಾವಿರಕ್ಕೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಸೂಕ್ತವಾದ ದಾಖಲೆಗಳು ಮಾಲೀಕರಿಗೆ ಲಭ್ಯವಾಗದೇ, ಸೌಲಭ್ಯಗಳು ದೊರೆಯುವುದಿಲ್ಲ. ಈ ಹಿನ್ನೆಲೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆದಿದ್ದು, ಒಂದು ಬಾರಿಯ ಪರಿಹಾರವಾಗಿ 38 (ಡಿ) ಅಡಿ ಅಂತಹ ಮನೆಗಳನ್ನು ಸಕ್ರಮ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಓದಿ:ಬಸವನಪುರ ಕೆರೆ ಒತ್ತುವರಿ ಆರೋಪ : ಸರ್ವೇ ಮಾಡಿ ವರದಿ ನೀಡುವಂತೆ ಹೈಕೋರ್ಟ್ ಸೂಚನೆ
ಕೆಲವರು ಮನೆಗಳನ್ನು ಕಟ್ಟಿಸಿಕೊಂಡು ಬಿಬಿಎಂಪಿಯಿಂದ ಖಾತೆ ಮಾಡಿಸಿಕೊಂಡಿದ್ದಾರೆ. ರೆವಿನ್ಯೂ ಖಾತೆ, ಬಿ ಖಾತೆ ಮಾಡಿಸಿಕೊಂಡಿದ್ದಾರೆ. ಆದರೆ ಇವುಗಳಿಗೆ ಮಾನ್ಯತೆ ಇಲ್ಲದಿದ್ದರೂ ಮಾಡಿಸಿಕೊಂಡಿದ್ದಾರೆ. ಇದಕ್ಕೊಂದು ಅಂತಿಮ ಪರಿಹಾರ ನೀಡಲೆಂದೇ ಈ ನಿರ್ಧಾರಕ್ಕೆ ಬರಲಾಗಿದೆ. ಗರಿಷ್ಠ 50-80ರವರೆಗಿನ ನಿವೇಶನದಲ್ಲಿ ಕಟ್ಟಿದ ಮನೆಗಳನ್ನು ಮಾತ್ರ ಸಕ್ರಮ ಮಾಡುತ್ತೇವೆ ಎಂದು ಹೇಳಿದರು. ಇಂತಹ ಮನೆಗಳನ್ನು ನೆಲಸಮ ಮಾಡುವುದು ಕಷ್ಟಕರವಾದ ಕೆಲಸವಾಗಿದೆ. ಈ ಹಿನ್ನೆಲೆ ಅಂತಹ ಮನೆಗಳನ್ನು ಗುರುತಿಸುವ ಪ್ರಕ್ರಿಯೆ ಕೈಗೊಳ್ಳಲು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಡಲಾಗಿದೆ. ಹಂತ ಹಂತವಾಗಿ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಗುರುತಿಸಲ್ಪಟ್ಟ ಮನೆಗಳ ಮಾಲೀಕರಿಗೆ ನೋಟಿಸ್ ನೀಡಿ ಸಕ್ರಮ ಮಾಡಿಕೊಳ್ಳುವಂತೆ ತಿಳಿಹೇಳಲಾಗುತ್ತಿದೆ ಎಂದು ತಿಳಿಸಿದರು.
ಆ ಶುಲ್ಕ ದುಬಾರಿಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಯಾ ಪ್ರದೇಶಗಳ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಶುಲ್ಕವನ್ನು ವಿಧಿಸಿ ಮನೆಗಳನ್ನು ಸಕ್ರಮ ಮಾಡಿಕೊಟ್ಟು, ಸ್ಪಷ್ಟ ಸ್ವಾಧೀನ ಪತ್ರವನ್ನು ನೀಡಲಾಗುತ್ತದೆ ಎಂದು ಅಧ್ಯಕ್ಷ ವಿಶ್ವನಾಥ್ ತಿಳಿಸಿದರು.