ಬೆಂಗಳೂರು:ರಾಜ್ಯದಲ್ಲಿ ಸ್ಮಶಾನ ಭೂಮಿ ಒದಗಿಸುವ ಸಂಬಂಧ ಹಲವು ಗ್ರಾಮಗಳಲ್ಲಿ ಹೆಚ್ಚುವರಿ ಸ್ಮಶಾನ ಭೂಮಿ ಮತ್ತು ತಮ್ಮ ತಮ್ಮ ಧರ್ಮಗಳಿಗೆ ಪ್ರತ್ಯೇಕ ಸ್ಮಶಾನ ಭೂಮಿ ಒದಗಿಸುವಂತೆ ಅರ್ಜಿಗಳು ಬಂದಿವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಸ್ಮಶಾನವಿಲ್ಲದ ಗ್ರಾಮ ಮತ್ತು ಪಟ್ಟಣಗಳಿಗೆ ಅಗತ್ಯ ಜಮೀನು ಒದಗಿಸಲು ಹೈಕೋರ್ಟ್ ಹೊರಡಿಸಿದ ಆದೇಶವನ್ನು ಸರ್ಕಾರ ಪಾಲಿಸಿಲ್ಲ ಎಂದು ಆಕ್ಷೇಪಿಸಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಸಲ್ಲಿಸಿದ ಪ್ರಮಾಣ ಪತ್ರ ಸಲ್ಲಿಸಿದರು.
ಸ್ಮಶಾನ ಜಾಗವಿಲ್ಲದ ಗ್ರಾಮಗಳ ಅಗತ್ಯ ಜಮೀನು ಕೋರುವಂತೆ ತಿಳಿಸಿ ಈ ಹಿಂದೆ ಸರ್ಕಾರ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಅದರ ಪರಿಣಾಮ ಕೆಲ ಸ್ಥಳೀಯ ನಿವಾಸಿಗಳು ಸ್ಮಶಾನಕ್ಕೆ ಹೆಚ್ಚುವರಿ ಜಮೀನು ಒದಗಿಸುವಂತೆ ಕೋರಿದ್ದಾರೆ. ಮತ್ತಷ್ಟು ಜನರು ತಮ್ಮ ಧರ್ಮದವರಿಗೆ ಪ್ರತ್ಯೇಕ ಸ್ಮಶಾನ ಸೌಲಭ್ಯ ಒದಗಿಸುವಂತೆ ತಿಳಿಸಿದ್ದಾರೆ. ಅವರ ಮನವಿಗಳನ್ನು ಕಾನೂನು ಪ್ರಕಾರ ಪರಿಶೀಲನೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.
೨೮೨೭೬ ಗ್ರಾಮಗಳಿಗೆ ಸ್ಮಶಾನ ಭೂಮಿ:ರಾಜ್ಯದಲ್ಲಿ ಒಟ್ಟು ೩೦,೭೮೧ ಗ್ರಾಮಗಳಿವೆ. ಅವುಗಳಲ್ಲಿ ೨,೫೦೦ ಬೇಚರಕ್ (ಜನವಸತಿ ಇಲ್ಲದ) ಗ್ರಾಮಗಳಿವೆ. ಜನವಸತಿ ೨೮,೨೮೧ ಗ್ರಾಮಗಳನ್ನು ಗುರುತಿಸಲಾಗಿದೆ. ಅದರಲ್ಲಿ ಒಟ್ಟು ೨೮,೨೭೬ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ. ಉಳಿದಂತೆ ೫ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಬೇಕಿದೆ. ಉಡುಪಿಯಲ್ಲಿ ಎರಡು ಮತ್ತು ರಾಯಚೂರಿನಲ್ಲಿ ಮೂರು ಗ್ರಾಮಗಳಲ್ಲಿ ಸ್ಮಶಾನ ಭೂಮಿಗಾಗಿ ಖಾಸಗಿಯವರ ಭೂಮಿ ಗುರುತಿಸಲಾಗಿದೆ. ಸರ್ಕಾರಿ ಜಮೀನು ಲಭ್ಯವಿಲ್ಲದಿರುವುದೇ ಇದಕ್ಕೆ ಕಾರಣ. ರಾಜ್ಯದ ಒಟ್ಟಾರೆ ಗ್ರಾಮಗಳಲ್ಲಿ ಶೇ.೯೯.೮ ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ ಎಂದು ಸರ್ಕಾರ ವಿವರಿಸಿದೆ.