ಕರ್ನಾಟಕ

karnataka

ETV Bharat / state

ತುಮಕೂರು - ನೆಲಮಂಗಲ ನಡುವೆ ಬೀದಿ ದೀಪ ಅಳವಡಿಸಲು ಕೋರಿ ಅರ್ಜಿ: ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ - ಬೀದಿ ದೀಪಗಳನ್ನು ಅಳವಡಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿ

ನೆಲಮಂಗಲ ಹಾಗೂ ತುಮಕೂರು ಹೆದ್ದಾರಿ ನಡುವೆ ಬೀದಿ ದೀಪಗಳನ್ನು ಅಳವಡಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

highcourt
highcourt

By

Published : Jun 16, 2021, 9:44 PM IST

ಬೆಂಗಳೂರು: ನೆಲಮಂಗಲ ಹಾಗೂ ತುಮಕೂರು ಹೆದ್ದಾರಿ ನಡುವೆ ಬೀದಿ ದೀಪಗಳನ್ನು ಅಳವಡಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೆಲಮಂಗಲದಿಂದ ತುಮಕೂರುವರೆಗೆ ಬೀದಿ ದೀಪಗಳನ್ನು ಅಳವಡಿಸಲು ಕೋರಿ ಕ್ಯಾತಸಂದ್ರದ ವಕೀಲ ರಮೇಶ್ ಎಲ್. ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ವಾದ ಆಲಿಸಿದ ಪೀಠ, ರಾಜ್ಯದ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜೆಎಎಸ್‌ಎಸ್ ಟೋಲ್ ರೋಡ್ ಕಂಪನಿ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.

ಅರ್ಜಿದಾರರ ಕೋರಿಕೆ :

ರಾಷ್ಟ್ರೀಯ ಹೆದ್ದಾರಿಯ ಸಂಖ್ಯೆ 4/48ರ ನೆಲಮಂಗಲದಿಂದ ತುಮಕೂರುವರೆಗಿನ 32.5 ಕಿ.ಮೀ ಉದ್ದದ ರಸ್ತೆಯನ್ನು 18 ವರ್ಷ ಕಾಲ ನಿರ್ವಹಣೆ ಮಾಡಲು ಜೆಎಎಸ್‌ಎಸ್ ಟೋಲ್ ರೋಡ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆದರೆ, ರಸ್ತೆ ನಿರ್ವಹಣೆ ಕಳಪೆಯಾಗಿದ್ದು, ಬೀದಿ ದೀಪಗಳನ್ನೂ ಅಳವಡಿಸಿಲ್ಲ. ಇದರಿಂದಾಗಿ ರಾತ್ರಿ ಪ್ರಯಾಣಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅನುಭವಿ ಚಾಲಕರೂ ಕೂಡ ಭಯದಲ್ಲೇ ವಾಹನ ಚಲಾಯಿಸಬೇಕಿದೆ. ಹೆದ್ದಾರಿ ಬದಿ ವಾಣಿಜ್ಯ ಕಟ್ಟಡಗಳಿರುವ ಕಡೆ ಹಾಗೂ ಹಳ್ಳಿಗಳ ಸಮೀಪ ಮಾತ್ರ ಬೀದಿ ದೀಪ ಅಳವಡಿಸಲಾಗಿದೆ.

ಅಗತ್ಯ ಸೌಲಭ್ಯ ಕಲ್ಪಿಸದೆಯೂ ಪ್ರಯಾಣಿಕರಿಂದ ಟೋಲ್ ಸಂಗ್ರಹಿಸುತ್ತಿರುವುದು, ಮುಕ್ತ ಸಂಚಾರಕ್ಕೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಆದ್ದರಿಂದ, ನೆಲಮಂಗಲ-ತುಮಕೂರು ನಡುವಿನ ಹೆದ್ದಾರಿಯಲ್ಲಿ ಬೀದಿ ದೀಪ ಅಳವಡಿಸಬೇಕು. ಹೆದ್ದಾರಿ ಪಕ್ಕದಲ್ಲಿ ಪರ್ಯಾಯವಾಗಿ ಸರ್ವೀಸ್ ರಸ್ತೆ ನಿರ್ಮಿಸಬೇಕು. ಕ್ಯಾತಸಂದ್ರ - ಚೊಕ್ಕೇನಹಳ್ಳಿ ಟೋಲ್ ಫ್ಲಾಜ್ ಮೂಲಕ ತುಮಕೂರು ನಗರಕ್ಕೆ ಪ್ರಯಾಣಿಸುವ ಸ್ಥಳೀಯ ಪ್ರಯಾಣಿಕರಿಗೆ ಟೋಲ್ ಪಾವತಿಯಿಂದ ವಿನಾಯ್ತಿ ನೀಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details