ಬೆಂಗಳೂರು:ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸರ್ವಾನುಮತದಿಂದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಮೀಸಲಾತಿ ಹೆಚ್ಚಳ, ರಾಜ್ಯ ಪ್ರವಾಸ, ಸಮಾವೇಶಗಳ ಆಯೋಜನೆ ಕುರಿತು ಮಹತ್ವದ ಮಾತುಕತೆ ನಡೆಸಲಾಯಿತು.
ಸರ್ವಾನುಮತದಿಂದ ಸಿಎಂಗೆ ಆಗ್ರಹ:ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿ.ಟಿ ರವಿ, ಇಂದು ಬೆಳಗ್ಗೆ 9ರಿಂದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸರ್ವಾನುಮತದಿಂದ ಸಿಎಂಗೆ ಆಗ್ರಹ ಮಾಡಲಾಗಿದೆ. ಅಕ್ಟೋಬರ್ 9 ರ ಒಳಗೆ ವಾಲ್ಮೀಕಿ ಸಮುದಾಯದ ಎಸ್ಟಿ ಮೀಸಲಾತಿ ಬೇಡಿಕೆ ಪುರಸ್ಕರಿಸಿ, ಹೆಚ್ಚಿಸುವ ನಿರ್ಣಯ ಮಾಡುವಂತೆ ಮನವಿ ಮಾಡಿದೆ. ಬಿಜೆಪಿ ಬಹಳ ಹಿಂದಿನಿಂದಲೂ ಎಸ್ಸಿ, ಎಸ್ಟಿ ಸಮುದಾಯದ ಪರವಾಗಿ ಕೆಲಸ ಮಾಡಿದೆ. ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸುವ ನಿರ್ಣಯ ಮಾಡಲಾಗಿದೆ ಎಂದರು.
ಬಿಜೆಪಿ ಸಾಮಾಜಿಕ ನ್ಯಾಯಕ್ಕಾಗಿ ಬದ್ಧ: ಅಕ್ಟೋಬರ್ 9ರೊಳಗೆ ನಿರ್ಣಯಕ್ಕೆ ಸೂಚನೆ ನೀಡುವುದಾಗಿ ಸಿಎಂ ತಿಳಿಸಿದ್ದಾರೆ. ಎಸ್ಸಿ ಸಮುದಾಯದ ಸಾಧಕ ಬಾದಕದ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಈಗ ಎಸ್ಟಿ ಸಮುದಾಯಕ್ಕೆ ಮಾತ್ರ ಹೆಚ್ಚಿಸಲು ಮನವಿ ಮಾಡಿದ್ದೇವೆ. ಎಷ್ಟು ಮಾಡಬೇಕು ಅಂತ ಸಿಎಂ ನಿರ್ಧಾರ ಮಾಡಲಿದ್ದಾರೆ. ಎಸ್ಸಿ, ಎಸ್ಟಿ ಮೀಸಲಾತಿ ಎಷ್ಟು ಮಾಡಬೇಕು ಅಂತ ಸಮಿತಿ ರಚಿಸಲಾಗಿತ್ತು. ಬಿಜೆಪಿ ಸಾಮಾಜಿಕ ನ್ಯಾಯಕ್ಕಾಗಿ ಬದ್ಧವಾಗಿದೆ. ಅದರಲ್ಲಿ ರಾಜಿ ಇಲ್ಲ. ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿಗೆ ಬಿಜೆಪಿ ಸಕಾರಾತ್ಮಕವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ:ದೇಶ ಇಬ್ಭಾಗ ಮಾಡುವಾಗ ಸಹಿ ಹಾಕಿದ್ದು ಕಾಂಗ್ರೆಸ್, ಬಿಜೆಪಿಯಲ್ಲ: ಸಿ ಟಿ ರವಿ