ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ಈ ವಿಚಾರವಾಗಿ ಸರ್ಕಾರಕ್ಕೆ 30 ದಿನಗಳ ಗಡುವು ನೀಡಿದ್ದು, ಬೇಡಿಕೆ ಈಡೇರದೇ ಇದ್ದರೆ ವಾಣಿಜ್ಯ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇದೀಗ 15 ವರ್ಷದ ಹಳೆಯ ವಾಣಿಜ್ಯ ವಾಹನಗಳು ಸಂಚರಿಸದಂತೆ ನಿಷೇಧ ಹೇರಲು ನಿರ್ಧರಿಸಿದ್ದು, ವಾಹನಗಳನ್ನು ಸ್ಕ್ರಾಪಿಂಗ್ ಕುರಿತು ಮರು ನೋಂದಣಿ ಹಾಗೂ ವಾಹನ ದೃಢೀಕರಣ ಶುಲ್ಕಗಳನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಮಿಲ್‌ಗಳಿಗೆ ಸಾಗಣೆ ಮಾಡುವ ಕಬ್ಬು, ಭತ್ತ, ಜೋಳ, ಹತ್ತಿ ಸಾಗಿಸುವ ರೈತರಿಗೂ ಇದು ತೊಂದರೆ ಉಂಟುಮಾಡಲಿದೆ ಎಂದರು.
ಕಳೆದ 15 ದಿನಗಳಿಂದ ಇಂಧನ ದರ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಲೇ ಇದೆ. ಇಡೀ ಸಾಗಣೆ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದ್ದು, ಸಾಗಣೆ ಮಾಡಿಯೂ ಲಾರಿ ಮಾಲೀಕನಿಗೆ ಏನೂ ಉಳಿಯುವುದಿಲ್ಲ. ನೋಟ್ ಬ್ಯಾನ್, ಜಿ.ಎಸ್.ಟಿ. ಕೊರೊನಾ ಸೋಂಕು ಇವುಗಳು ಸಾಗಣೆ ಉದ್ಯಮಕ್ಕೆ ಹಾನಿ ಉಂಟುಮಾಡಿದೆ. ಹೀಗಾಗಿ ಡೀಸೆಲ್ ದರ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಾರ್ಡರ್ ಚೆಕ್‌ಪೋಸ್ಟ್ ರದ್ದತಿಗೆ ಮನವಿ:ರಾಜ್ಯ ಹೆದ್ದಾರಿಯಲ್ಲಿ ಚಿತ್ರದುರ್ಗ ಹಾಗೂ ಬಿಜಾಪುರ, ಕೊಪ್ಪಳ, ಹಾವೇರಿ ಜಿಲ್ಲೆಗಳಿಗೆ ಪ್ರವೇಶಿಸುವಾಗ ತಪಾಸಣಾ ನೆಪದಲ್ಲಿ ವಾಹನಗಳನ್ನು ತಡೆದು ಗಡಿಭಾಗದಲ್ಲಿ ಅಧಿಕಾರಿಗಳು ತೀವ್ರ ಕಿರುಕುಳ ನೀಡುತ್ತಿದ್ದಾರೆ. ಗಡಿ ತಪಾಸಣೆ ನಿಲ್ಲಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ:ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: ಆತಂಕ ಬೇಡ ಎಂದ ಸಿಎಂ