ಬೆಂಗಳೂರು: ಕೆಲ ದಿನಗಳಲ್ಲೇ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ವರ್ಷದ ಮೊದಲ ರಾಷ್ಟ್ರೀಯ ಹಬ್ಬ ಜ. 26ರ ಗಣರಾಜ್ಯೋತ್ಸವಕ್ಕೆ ಪ್ರತೀ ವರ್ಷ ಬೆಂಗಳೂರಿನ ಲಾಲ್‌ಬಾಗ್ ಗಾಜಿನ ಮನೆ ಫಲಪುಷ್ಪಗಳಿಂದ ವಿಭಿನ್ನವಾಗಿ ಅಲಂಕಾರಗೊಳ್ಳುತ್ತದೆ. ಪ್ರತೀ ವರ್ಷದಂತೆ ಈ ವರ್ಷವೂ ಲಾಲ್‌ಬಾಗ್ ಗಣರಾಜ್ಯೋತ್ಸವ ದಿನದ ಅಂಗವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಮುಂದಾಗಿದೆ. ಈ ಬಾರಿ ರಾಜಧಾನಿ ಬೆಂಗಳೂರು ನಗರದ ಹುಟ್ಟು, ಬೆಳೆದ ಬಂದ ಹಾದಿಯ ಕುರಿತಂತೆ ನಗರದ ಇತಿಹಾಸವನ್ನು ಬಿಂಬಿಸುವ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
ಜ. 19 ರಿಂದ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಸರ್ಕಾರದ ಹಿರಿಯ ಅಧಿಕಾರಿಗಳ ಹಂತದಲ್ಲಿ ಚರ್ಚೆ ನಡೆಸಲಾಗಿದೆ. ಬೆಂಗಳೂರು ಇತಿಹಾಸ ಬಿಂಬಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಸುಮಾರು 1500 ವರ್ಷಗಳ ಇತಿಹಾಸವಿದೆ. ಈ ಇತಿಹಾಸ ಈಗಿನ ಯುವ ಜನತೆಗೆ ಅರ್ಥೈಸಬೇಕಾಗಿದೆ. ಇದಕ್ಕಾಗಿ ಇದೇ ವಿಷಯವನ್ನು ಪ್ರಸಕ್ತ ವರ್ಷದ ವಿಷಯವಸ್ತುವನ್ನಾಗಿ ನಿರ್ಧರಿಸಲಾಗಿದೆ ಅಧಿಕಾರಿಗಳು ವಿವರಿಸಿದರು.
ಮೈಸೂರು ಉದ್ಯಾನ ಕಲಾಸಂಘ ಕೈ ಬಿಟ್ಟು ಪ್ರದರ್ಶನ:ಸುಮಾರು 100 ವರ್ಷಗಳ ಇತಿಹಾಸವಿರುವ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಸಹಭಾಗಿತ್ವದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತದೆ. ಪ್ರತಿ ವರ್ಷ ಮೈಸೂರು ಉದ್ಯಾನ ಕಲಾ ಸಂಘ ಪ್ರದರ್ಶನಕ್ಕೆ ಹಣಕಾಸು ನೆರವು ಒದಗಿಸುತ್ತಿತ್ತು. ಅದರಲ್ಲಿ ಬಂದ ಲಾಭಾಂಶದಲ್ಲಿ ಇಲಾಖೆ ಮತ್ತು ಸಂಘ ಹಂಚಿಕೊಳ್ಳುತ್ತಿತ್ತು. ಪ್ರಸಕ್ತ ವರ್ಷ ಸರ್ಕಾರವೇ ಪ್ರದರ್ಶನ ಹಮ್ಮಿಕೊಳ್ಳುವುದಕ್ಕೆ ಮುಂದಾಗಿದೆ ಎಂದು ಮೈಸೂರು ಉದ್ಯಾನ ಕಲಾ ಸಂಘದ ಪದಾಧಿಕಾರಿಯೊಬ್ಬರು ಈಟಿವಿ ಭಾರತ್ಗೆ ವಿವರಿಸಿದ್ದಾರೆ.
ಕೊರೊನಾ ಕರಿ ನೆರಳು:ಫಲಪುಷ್ಪ ಪ್ರದರ್ಶನಕ್ಕೆ ದಿನಾಂಕ ಹತ್ತಿರವಾಗುತ್ತದ್ದಂತೆ ಕೊರೊನಾ ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೊರೊನಾ ಸೋಂಕು ಹೆಚ್ಚಾದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.