ಕರ್ನಾಟಕ

karnataka

ETV Bharat / state

ಪ್ರಪ್ರಥಮ ಬಾರಿಗೆ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ - etv bharat kannada

ಇದೇ ಮೊದಲ ಬಾರಿಗೆ ಚಾಮರಾಜಪೇಟೆಯಲ್ಲಿ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

chamrajpet
ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

By

Published : Jan 26, 2023, 10:24 AM IST

Updated : Jan 26, 2023, 11:47 AM IST

ಚಾಮರಾಜಪೇಟೆಯಲ್ಲಿ ಗಣರಾಜ್ಯೋತ್ಸವ

ಬೆಂಗಳೂರು:ಪ್ರತಿ ವರ್ಷದೇಶದೆಲ್ಲೆಡೆ ಜನವರಿ 26 ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಈ ವರ್ಷವೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು. ಕಂದಾಯ ಇಲಾಖೆಯಿಂದ ಇಲ್ಲಿನ ಮೈದಾನದಲ್ಲಿ ಬೆಳಗ್ಗೆ 8 ಗಂಟೆಗೆ ಸರಿಯಾಗಿ ಧ್ವಜಾರೋಹಣ ನೆರವೇರಿತು.

ಧ್ವಜಾರೋಹಣವನ್ನು ಬೆಂಗಳೂರು ಉತ್ತರ ಅಸಿಸ್ಟೆಂಟ್ ಕಮಿಷನರ್ ಡಾ.ಶಿವಣ್ಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಉಪಸ್ಥಿತರಿದ್ದರು. 100ಕ್ಕೂ ಅಧಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಬ್ಯಾಂಡ್ ಸೆಟ್, ಕಂಸಾಳೆ ಸೇರಿದಂತೆ ಹಲವು ವಿಶೇಷತೆಗಳು ನೋಡುಗರ ಕಣ್ಮನ ಸೆಳೆಯಿತು. ಸಂತ ತೆರೇಸ ಬಾಲಕಿಯರ ಶಾಲೆ, ಚಾಮರಾಜಪೇಟೆ ಬಾಲಕಿಯರ ಶಾಲೆ, ಸರ್ಕಾರಿ ಕನ್ನಡ ಮತ್ತು ಆಂಗ್ಲ ಪ್ರಾಥಮಿಕ ಶಾಲೆ ಸೇರಿದಂತೆ 5 ಶಾಲೆಗಳಿಂದ ಮಕ್ಕಳು ಗಣರಾಜ್ಯೋತ್ಸವದಲ್ಲಿ ಭಾಗಿಯಾಗಿದ್ದರು. ನೆರೆದಿದ್ದ ಜನರು ಭಾರತ ಮಾತೆಗೆ ಜೈಕಾರ ಹಾಕಿದರು.

ಬಿಗಿ ಪೊಲೀಸ್ ಭದ್ರತೆ:ಕಾರ್ಯಕ್ರಮ ಮುಗಿದ ಬಳಿಕ ಮೈದಾನದಿಂದ ನಿರ್ಗಮಿಸಲು ಸೂಚನೆ ನೀಡಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರವಹಿಸಿದ್ದರು. ಸಿಸಿಟಿವಿ ಅಳವಡಿಸಿ ಮಾನಿಟರಿಂಗ್‌ ಕೊಠಡಿ ಸಜ್ಜುಗೊಳಿಸಲಾಗಿತ್ತು. ಬಿಗಿ ಪೊಲೀಸ್ ಭದ್ರತೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ನಾಗರಿಕರ ಒಕ್ಕೂಟಕ್ಕೆ ಸಂದ ಜಯ:ಇದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಹಾಗೂ ಹಿಂದೂ ಸಂಘಟನೆಗಳ ಹೋರಾಟಕ್ಕೆ ದಕ್ಕಿದ ಪ್ರತಿಫಲ ಎಂದು ಜನರು ಹೇಳಿದ್ದಾರೆ. ಧ್ವಜಾರೋಹಣ ಮಾತ್ರವಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶ ನೀಡುವಂತೆ ಒಕ್ಕೂಟದಿಂದ ಒತ್ತಾಯ ಮಾಡಲಾಗಿತ್ತು. ದೇಶದ ಹಬ್ಬವನ್ನು ಆಚರಿಸಲು ಯಾಕೆ ಹಿಂದೇಟು ಹಾಕಬೇಕು? ಎಂದು ಪ್ರಶ್ನಿಸಿದ್ದರು. ಇದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಈ ರೀತಿಯ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಈ ಮೊದಲು ಹೇಳಲಾಗಿತ್ತು.

ಇದನ್ನೂ ಓದಿ:ದೇಶಾದ್ಯಂತ 74ನೇ ಗಣರಾಜ್ಯೋತ್ಸವ ಸಡಗರ: ಎಲ್ಲರ ಚಿತ್ತ ದೆಹಲಿಯ ಕರ್ತವ್ಯ ಪಥದತ್ತ..

ಭವಿಷ್ಯದಲ್ಲಿ ಹಲವು ಕಾರ್ಯಕ್ರಮಗಳು: ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಪಿ.ಸಿ. ಮೋಹನ್, "ಸ್ವಾತಂತ್ರ್ಯ ಬಂದು ಹಲವಾರು ವರ್ಷಗಳಾಗಿವೆ. ಇದೇ ಮೊದಲ ಬಾರಿಗೆ ನಾವು ಬಹಳ ವಿಜೃಂಭಣೆಯಿಂದ ಗಣರಾಜ್ಯೋತ್ಸವವನ್ನು ಚಾಮರಾಜಪೇಟೆ ಮೈದಾನದಲ್ಲಿ ನಡೆಸಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನೂ ಹಲವು ಕಾರ್ಯಕ್ರಮಗಳನ್ನು ನಡೆಸಲಿದ್ದೇವೆ ಮತ್ತು ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುಮತಿಯನ್ನು ಕೇಳುತ್ತೇನೆ" ಎಂದರು.

ಮೊದಲ ಬಾರಿಗೆ ಚಾಮರಾಜಪೇಟೆಯಲ್ಲಿ ಗಣರಾಜ್ಯೋತ್ಸವ

ಮಾಧ್ಯಮದ ಪ್ರಶ್ನೆಗೆ ಶಾಸಕ ಸಿಡಿಮಿಡಿ:ಶಾಸಕ ಜಮೀರ್ ಅಹ್ಮದ್ ಖಾನ್ ಮಾತನಾಡಿ, ನಾಡಿನ ಜನತೆಗೆ 74ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಬಳಿಕ, "ನಾನು ಮುಖ್ಯಮಂತ್ರಿಗಳಿಗೆ, ಕಂದಾಯ ಇಲಾಖೆಗೆ ಪತ್ರ ಬರೆದಿದ್ದೆ. ಗಣರಾಜ್ಯೋತ್ಸವ ಆಚರಣೆ ಮಾಡಬೇಕೆಂದು ಅನುಮತಿ ಕೇಳಿದ್ದೆ. ಸರ್ಕಾರ ಅನುಮತಿ ಕೊಟ್ಟಿದ್ದು ನಿಜಕ್ಕೂ ಖುಷಿಯಾಗಿದೆ" ಎಂದು ಹೇಳಿದರು.

ಹಿಂದೂಗಳ ಹಬ್ಬಕ್ಕೂ ಪತ್ರ ಬರೆಯುತ್ತೀರಾ? ಎಂಬ ಸುದ್ದಿಗಾರರ ಪ್ರಶ್ನೆಗೆ ಸಿಡಿಮಿಡಿಗೊಂಡ ಶಾಸಕರು, "ಇದು ನನ್ನ ಸ್ವತ್ತಲ್ಲ‌, ಸರ್ಕಾರದ ಸ್ವತ್ತು. ಇದರ ಬಗ್ಗೆ ಕಂದಾಯ ಸಚಿವ ಆರ್​.ಅಶೋಕ್‌ರನ್ನು ಕೇಳಬೇಕು. ಗಣರಾಜ್ಯೋತ್ಸವ ಆಚರಣೆ ಕುರಿತು ನಾನು ಜನವರಿ 3ರಂದೇ ಸರ್ಕಾರಕ್ಕೆ ಪತ್ರ ಬರೆದ್ದಿದೇನೆ. ಅನುಮತಿ ಕೊಟ್ಟಿರುವುದು ಸಂತಸ ತಂದಿದೆ" ಎಂದರು.

ನಾಗರಿಕರ ಒಕ್ಕೂಟದ ಅಸಮಾಧಾನ: ಮಾಧ್ಯಮದೊಂದಿಗೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಮಾತನಾಡಿ, "ಅಂತೂ 74ನೇ ಗಣರಾಜ್ಯೋತ್ಸವ ಆಚರಣೆಯನ್ನು ನಾವು ಮಾಡುತ್ತಿದ್ದೇವೆ. ಸರ್ಕಾರದ ಜೊತೆಗೆ ಸುಮಾರು ಒಂದು ತಿಂಗಳಿನಿಂದ ಸಂಪರ್ಕದಲ್ಲಿ ಇದ್ದೇವೆ. ನಿನ್ನೆ ಸಂಜೆವರೆಗೂ ಸರಕಾರದ ಅಧಿಕೃತ ಅನುಮತಿ ನಮಗೆ ಸಿಕ್ಕಿರಲಿಲ್ಲ. ಕಾರ್ಯಕ್ರಮ ನಡೆಯುತ್ತೋ ಇಲ್ಲವೋ ಎನ್ನುವ ಗೊಂದಲ ಇತ್ತು. ಇವತ್ತಿನ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಎಷ್ಟೋ ಜನಕ್ಕೆ ಗೊತ್ತೇ ಇರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

"ಸರ್ಕಾರದಿಂದ ಬಹಳ ಲೋಪದೋಷಗಳು ಆಗಿವೆ. ಚಾಮರಾಜಪೇಟೆಯಲ್ಲಿ ಅನೇಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಯಾರಿಗೂ ಕೂಡ ಸಕಾಲದಲ್ಲಿ ಕಾರ್ಯಕ್ರಮದ ಕುರಿತು ತಿಳಿಸಿಲ್ಲ. ಆದರೆ ನಿನ್ನೆ ಸಂಜೆಯಿಂದ ನಾಗರಿಕರ ಒಕ್ಕೂಟದ ವತಿಯಿಂದ ಪ್ರಚಾರ ಮಾಡಿದ್ದೆವು. ಸರ್ಕಾರದ ಕಡೆಯಿಂದ ವ್ಯವಸ್ಥೆ ಸರಿಯಾಗಿಲ್ಲ" ಎಂದು ಹೇಳಿದರು.

ಇದನ್ನೂ ಓದಿ:ಗಣರಾಜ್ಯೋತ್ಸವದ ಶುಭಾಶಯಗಳು ಭಾರತ!: ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್

Last Updated : Jan 26, 2023, 11:47 AM IST

ABOUT THE AUTHOR

...view details