ಕರ್ನಾಟಕ

karnataka

ETV Bharat / state

ಜನಪ್ರತಿನಿಧಿಗಳ ವಿಪ್​ ಉಲ್ಲಂಘನೆ ಪ್ರಕರಣ: ಸೂಕ್ತ ನಿಯಮ ರೂಪಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಜನಪ್ರತಿನಿಧಿಗಳ ವಿಪ್ ಉಲ್ಲಂಘನೆ ಪ್ರಕರಣ - ಕರ್ನಾಟಕ ಸ್ಥಳೀಯ ಸಂಸ್ಥೆ ಪ್ರಾಧಿಕಾರ (ಪಕ್ಷಾಂತರ ನಿಷೇಧ) ಕಾಯಿದೆಯಡಿ ಅನರ್ಹತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

high court
ಹೈಕೋರ್ಟ್

By

Published : Jan 10, 2023, 8:18 PM IST

ಬೆಂಗಳೂರು:ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆವೇಳೆ ವಿಪ್ ಉಲ್ಲಂಘನೆ ಪ್ರಕರಣದೊಳಗೆ ಸಿಲುಕಿರುವ ಸದಸ್ಯರು ಅನರ್ಹತೆಗೆ ಒಳಗಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ) 1987 ರ ಕಾಯಿದೆಯಡಿ ಅನರ್ಹತೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೂಕ್ತ ನಿಯಮ ರೂಪಿಸುವಂತೆ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮನ್ನು ಸದಸ್ಯರ ಸ್ಥಾನದಿಂದ ಅನರ್ಹತೆಗೊಳಿಸಿದ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಸವಿತಾ , ಚಾಂದಿನಿ ಮತ್ತು ಗೋದಾವರಿ ಅವರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯ ಗೌಡ ಅವರ ಪೀಠವು, ಈ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.

ಇದರೊಂದಿಗೆ ರಾಜ್ಯ ಸರ್ಕಾರವು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ ಕಾಯ್ದೆ) 1987ರ ಕಾಯ್ದೆಯಡಿ ಅನರ್ಹತೆ ಪ್ರಕ್ರಿಯೆ ನಿಯಮ ರೂಪಿಸುವವರೆಗೆ ರಾಜಕೀಯ ಪಕ್ಷದ ತೀರ್ಮಾನ (ವಿಪ್) ಚುನಾಯಿತ ಸದಸ್ಯರಿಗೆ ರವಾನಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸೂಚಿಸಿದೆ. ಸ್ಥಳೀಯ ಸಂಸ್ಥೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ವೇಳೆ ಯಾರಿಗೆ ಮತ ಹಾಕಬೇಕು ಎಂಬ ಬಗ್ಗೆ ರಾಜಕೀಯ ಪಕ್ಷ ವಿಪ್ (ತೀರ್ಮಾನ) ತೆಗೆದುಕೊಳ್ಳಬೇಕು. ಅದನ್ನು ಚುನಾಯಿತ ಸದಸ್ಯರ ಸಭೆ ನಡೆಸುವ ಸಕ್ಷಮ ಅಧಿಕಾರಿಗೆ ರವಾನಿಸಬೇಕು. ಪಕ್ಷವು ತನ್ನ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ಐದು ದಿನಗಳ ಮುನ್ನ ತಲುಪಿಸಬೇಕು.

ಪಕ್ಷದ ತೀರ್ಮಾನವನ್ನು ಸಭೆ ನಡೆಸುವ 5 ದಿನಗಳ ಮುನ್ನ ಸಕ್ಷಮ ಅಧಿಕಾರಿಯು ಸ್ಥಳೀಯ ಸಂಸ್ಥೆಯ ತನ್ನ ಸದಸ್ಯರಿಗೆ ಕಳುಹಿಸಬೇಕು. ವಿಪ್ ನೋಟಿಸ್ ಅನ್ನು ಆರ್‌ಪಿಎಡಿ, ಕೊರಿಯರ್ ಅಥವಾ ಇ ಮೇಲ್ ಮೂಲಕ ಕಳುಹಿಸುವುದು ರಾಜಕೀಯ ಪಕ್ಷಗಳಿಗೆ ಬಿಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಅನುಮತಿ ಕೋರಲು ಸದಸ್ಯರಿಗೆ ಐದು ದಿನ ಕಾಲ ನೀಡಬೇಕಾಗುತ್ತದೆ. ಆಗ ಸದಸ್ಯರು ಅನರ್ಹತೆಗೆ ಒಳಗಾಗುವ ಸನ್ನಿವೇಶವನ್ನು ತಪ್ಪಿಸುತ್ತದೆ. ಒಂದೊಮ್ಮೆ ಪಕ್ಷದ ತೀರ್ಮಾನವನ್ನು ಸಕ್ಷಮ ಅಧಿಕಾರಿಗೆ ತಲುಪಿಸದೇ ಹೋದರೆ, ಸದಸ್ಯರ ವಿರುದ್ಧ ಅನರ್ಹತೆ ಪ್ರಕ್ರಿಯೆ ಕೈಗೊಳ್ಳುವಂತಿಲ್ಲ. ಒಂದೊಮ್ಮೆ ತೀರ್ಮಾನ ಕುರಿತ ನೋಟಿಸ್ ಜಾರಿಗೊಳಿಸಿದರೆ, ಅದು ವಿಪ್ ಜಾರಿ ಮಾಡಿದಂತಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಕರಣದ ಮಾಹಿತಿ:2020ರ ನ.11ರಂದು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಿಗದಿ ಆಗಿತ್ತು. ಇದರಿಂದ ಯಾರ ಪರವಾಗಿ ಮತ ಚಲಾಯಿಸಬೇಕು ಎಂಬ ಕುರಿತು ಚರ್ಚಿಸಲು ಬಿಜೆಪಿ ಪಕ್ಷವು 2020ರ ನ.7ರಂದು ಸದಸ್ಯರ ಸಭೆ ನಡೆಸಿತು. ಅಧ್ಯಕ್ಷ ಹುದ್ದೆಗೆ ಲಕ್ಷ್ಮೀ ಮಹಾಲಿಂಗಪ್ಪ ಮದ್ದಾಪುರ ಮತ್ತು ಉಪಾಧ್ಯಕ್ಷ ಹುದ್ದೆಗೆ ಸ್ನೇಹಾ ಶಿವಾನಂದ ಅಂಗಡಿ ಅವರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಗೊಳಿಸಿತ್ತು. ಈ ವೇಳೆ, ಅವರಿಗೆ ಮತಹಾಕುವಂತೆ ಎಲ್ಲ ಪುರಸಭೆ ಸದಸ್ಯರಿಗೆ ಬಿಜೆಪಿ ಸೂಚಿಸಿತ್ತು. ಆ ಸಭೆಗೆ ಅರ್ಜಿದಾರರು ಸಭೆಗೆ ಗೈರಾಗಿದ್ದರು.

2020ರ ನ.9ರಂದು ಚುನಾವಣೆ ನಡೆದ ವೇಳೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಕ್ರಮವಾಗಿ ಸವಿತಾ ಮತ್ತು ಚಾಂದಿನಿ ಸ್ಪರ್ಧಿಸಿದ್ದರು. ಇದರಿಂದ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ಮತ್ತು ಅರ್ಜಿದಾರರು ಸಮಾನವಾಗಿ ಅಂದರೆ ತಲಾ 10 ಮತಗಳನ್ನು ಗಳಿಸಿದ್ದರು. ಇದರಿಂದ ಟಾಸ್ ಮೂಲಕ ಚುನಾವಣೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಟಾಸ್‌ನಲ್ಲಿ ಸವಿತಾ ಸೋತರೆ, ಚಾಂದಿನಿ ಜಯ ಸಾಧಿಸಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.

ಬಿಜೆಪಿ ಪಕ್ಷದ ವಿಪ್ ಉಲ್ಲಂಘಿಸಿ ಚುನಾವಣೆಯಲ್ಲಿ ಮತದಾನ ಮಾಡಿದ್ದಕ್ಕೆ ಅವರನ್ನು ಅನರ್ಹಗೊಳಿಸಲು ಕೋರಿ ದೂರು ಸಲ್ಲಿಕೆಯಾಗಿತ್ತು. ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಅರ್ಜಿದಾರರನ್ನು ಅನರ್ಹಗೊಳಿಸಿ 2021ರ ಏ.8ರಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಇದೀಗ ಹೈಕೋರ್ಟ್, ನೋಟಿಸ್ (ವಿಪ್) ಅನ್ನು ಅರ್ಜಿದಾರರಿಗೆ ವೈಯಕ್ತಿಕವಾಗಿ ಅಥವಾ ಯಾವುದೇ ರೀತಿ ತಲುಪಿಸುವ ಪ್ರಯತ್ನ ನಡೆದಿಲ್ಲ. ವಿಪ್ ಜಾರಿಗೊಳಿಸಿದ ಮತ್ತು ಪಕ್ಷದ ನಿರ್ಧಾರವನ್ನು ಅರ್ಜಿದಾರಿಗೆ ತಿಳಿಸಿರುವ ಬಗ್ಗೆ ಸೂಕ್ಷ ಸಾಕ್ಷ್ಯಧಾರಗಳ ಕೊರತೆ ಇದೆ ಎಂದು ತಿಳಿಸಿ ಜಿಲ್ಲಾಧಿಕಾರಿ ಆದೇಶವನ್ನು ರದ್ದುಪಡಿಸಿದೆ.

ಅಲ್ಲದೆ, ಅನರ್ಹತೆ ಪ್ರಕ್ರಿಯೆ ಕುರಿತಂತೆ ಕಾಯ್ದೆಯಡಿ ಸೂಕ್ತ ನಿಯಮಗಳನ್ನು ರಚಿಸದ ಕಾರಣ ಇಂತಹ ಹಲವು ಪ್ರಕರಣಗಳು ಸೃಷ್ಟಿಯಾಗುತ್ತಿವೆ. ಅಲ್ಲದೆ, ಕಾಯ್ದೆಯ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇದರಿಂದ ಸಾರ್ವಜನಿಕ ಜೀವನದಲ್ಲಿ ಸಮಗ್ರತೆ ಕಾಯ್ದುಕೊಳ್ಳುವ ಉದ್ದೇಶವೇ ಸೋಲು ಕಾಣುತ್ತಿದೆ ಎಂದು ಆದೇಶದಲ್ಲಿ ಹೈಕೋರ್ಟ್​ವು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂಓದಿ:ಐಸಿಐಸಿಐ ವಂಚನೆ ಪ್ರಕರಣ: ಜಾಮೀನು ಕೋರಿದ ವೇಣುಗೋಪಾಲ್ ಧೂತ್, 13 ರಂದು ವಿಚಾರಣೆ

ABOUT THE AUTHOR

...view details